ಸೋಮವಾರಪೇಟೆ, ಮಾ. ೨೩: ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಭೂ ದಾಖಲೆಗಾಗಿ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಕೃಷಿಕರಿಂದ ಹಣದ ಬೇಡಿಕೆ ಇಡಲಾಗುತ್ತಿದೆ. ಅರ್ಜಿವಿಲೇವಾರಿಗೆ ಸದಸ್ಯರಿಗೂ ಹಣ ನೀಡಬೇಕೆಂದು ಅಧಿಕಾರಿಗಳು ವಸೂಲಾತಿಗೆ ಇಳಿದಿದ್ದಾರೆ. ಯಾವ ಸದಸ್ಯರು ಹಣ ಕೇಳಿದ್ದಾರೆಂದು ಬಹಿರಂಗಪಡಿಸಿ ಎಂದು ಅಕ್ರಮ ಸಕ್ರಮ ಸಮಿತಿಯ ಸದಸ್ಯರುಗಳೇ ಆಕ್ರೋಶಿತರಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಅಕ್ರಮ ಸಕ್ರಮ ಸಮಿತಿ ಸಭೆಯು ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಫಾರಂ ೫೭ ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಅಕ್ರಮ-ಸಕ್ರಮ ಯೋಜನೆಯ ಅರ್ಜಿ ವಿಲೇವಾರಿಗೆ ಸಮಿತಿಯ ಸದಸ್ಯರಿಗೂ ಹಣ ನೀಡಬೇಕೆಂದು ತಾಲೂಕು ಕಚೇರಿ ಸಿಬ್ಬಂದಿಗಳು ಹಾಗೂ ಕೆಲವು ದಲ್ಲಾಳಿಗಳು ಕೃಷಿಕರಿಂದ ಹಣ ಪಡೆಯುತಿದ್ದಾರೆ ಎಂಬ ದೂರುಗಳು ಬಂದಿವೆ ಎಂದು ಸಮಿತಿ ಸದಸ್ಯ ಎಂ.ಎನ್.ಕುಮಾರಪ್ಪ ಗಂಭೀರ ಆರೋಪ ಮಾಡಿದರು.
ಅಧಿಕಾರಿಗಳು ಯಾರಿಗೆ ಹಣ ಕೊಡುತ್ತಿದ್ದಾರೆ ಎಂದು ಹೇಳಬೇಕು. ಇಲ್ಲಿ ಹಣವಿಲ್ಲದೆ ಕಡತ ಮುಂದೆ ಹೋಗುತ್ತಿಲ್ಲ ಎಂದು ಸಾರ್ವಜನಿಕವಾಗಿ ಆರೋಪಗಳು ಕೇಳಿಬರುತ್ತಿವೆ. ಸರ್ಕಾರದ ಕೆಲಸ ಮಾಡಲು ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿದೆ. ಈ ನಡುವೆ ಬಡ ಕೃಷಿಕರಿಂದ ಹಣ ವಸೂಲಿ ಮಾಡುವುದು ಅಕ್ಷಮ್ಯ ಎಂದು ಕಿಡಿಕಾರಿದರು.
ಈ ಸಂದರ್ಭ ಮಾತನಾಡಿದ ಶಾಸಕರು, ಯಾರಿಗೆ ಹಣ ಕೊಡುತ್ತಿದ್ದೀರಿ ಎಂದು ಬಹಿರಂಗಪಡಿಸಿ. ಬಡ ಕೃಷಿಕರಿಗೆ ಸಹಾಯ ಮಾಡುವುದನ್ನು ಬಿಟ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಣಕ್ಕಾಗಿ ಜನ ಸಾಮಾನ್ಯರಿಗೆ ತೊಂದರೆ ಕೊಡಬೇಡಿ. ಹಣದ ಬೇಡಿಕೆ ಬಗ್ಗೆ ತಿಳಿದುಬಂದರೆ ಸುಮ್ಮನೆ ಕೂರುವುದಿಲ್ಲ. ತಕ್ಕ ಪಾಠ ಕಲಿಸಲಾಗುತ್ತದೆ. ಹಾಗೆಯೇ ಫಲಾನುಭವಿಗಳೂ ಸಹ ಲಂಚ ಕೊಡಬೇಡಿ ಎಂದರು. ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಈ ಸಾಲಿನ ಕೊನೆಯ ಸಭೆಯಾದ್ದ ರಿಂದ ಹಲವಷ್ಟು ಕಡತಗಳನ್ನು ವಿಲೇವಾರಿ ಮಾಡಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.
ಸಭೆಯಲ್ಲಿ ಸಮಿತಿ ಸದಸ್ಯರುಗಳಾದ ಸುಮಾ ಸುದೀಪ್, ಕೆಂಚೇಶ್ವರ, ತಹಶೀಲ್ದಾರ್ ನರಗುಂದ ಹಾಗೂ ತಾಲೂಕು ಕಚೇರಿ ಅಧಿಕಾರಿಗಳು ಉಪಸ್ಥಿತರಿದ್ದರು.