ಸೋಮವಾರಪೇಟೆ, ಮಾ. ೨೩: ವಿವಾಹಿತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಓರ್ವನನ್ನು ಬಂಧಿಸಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈರ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ನಂತರ ಮಡಿಕೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಪೊಲೀಸ್ ಕಾವಲು ಹಾಕಲಾಗಿದೆ. ತಮ್ಮ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ಆಸ್ಪತ್ರೆಯಲ್ಲಿರುವ ಓರ್ವ ಆರೋಪಿ ಪೊಲೀಸರಿಗೆ ದೂರು ನೀಡಿದ್ದು, ಸೋಮವಾರಪೇಟೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಘಟನೆಯ ವಿವರ: ತಾಲೂಕಿನ ಮಾದಾಪುರ ಉಪಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನೆಲೆಸಿರುವ ವಿವಾಹಿತ ಮಹಿಳೆ ಕಳೆದ ತಾ.೨೧ರಂದು ರಾತ್ರಿ ೯.೩೦ರ ಸುಮಾರಿಗೆ ತನ್ನ ಮನೆಯ ಮುಂಭಾಗ ನಿಂತಿದ್ದ ಸಂದರ್ಭ ಆಗಮಿಸಿದ ಅದೇ ಗ್ರಾಮದ ರಾಜು, ನೌಷಾದ್, ಫಾರೂಕ್ ಅವರುಗಳು, ಮಹಿಳೆಯನ್ನು ಬಲವಂತವಾಗಿ ಆಟೋದೊಳಗೆ ಎಳೆದುಕೊಂಡು ಸಮೀಪದ ತೋಟದೊಳಗೆ ಕರೆದೊಯ್ದಿದ್ದಾರೆ.
ನಂತರ ಮೂವರು ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದು, ರಾಜು ಮತ್ತು ನೌಷಾದ್ ಅವರುಗಳು ಬಲವಂತವಾಗಿ ಹಿಡಿದುಕೊಂಡ ಸಂದರ್ಭ ಫಾರೂಕ್ ಯಾವುದೋ ದ್ರವವನ್ನು ಬಾಯಿಗೆ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ಸಂದರ್ಭ ಮಹಿಳೆ ಜೋರಾಗಿ ಕೂಗಿಕೊಂಡಿದ್ದಾರೆ.
ಕಿರುಚಾಟ ಕೇಳಿ ಸಹೋದರಿ ಸೇರಿದಂತೆ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಈ ಸಂದರ್ಭ ಆರೋಪಿಗಳು ಮಹಿಳೆಗೆ ಜಾತಿ ನಿಂದನೆ ಮಾಡಿ, ಕೊಲೆ ಬೆದರಿಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾರೆ.
ನೊಂದ ಮಹಿಳೆ ತಡರಾತ್ರಿಯೇ ಸೋಮವಾರಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ ಮೇರೆ ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ೩೬೬, ೩೫೪, ೩೦೭, ೫೦೪, ೫೦೬ ಸೇರಿದಂತೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿದ್ದಾರೆ. ಘಟನೆಗೆ ಸಂಬAಧಿಸಿದAತೆ ಓರ್ವ ಆರೋಪಿ ರಾಜು ಎಂಬಾತನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ ಮೇರೆ, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆಸ್ಪತ್ರೆಯಲ್ಲಿ ಆರೋಪಿಗಳು: ಇತ್ತ ಘಟನೆಯ ಸಂದರ್ಭ ಪರಾರಿಯಾದ ಆರೋಪಿಗಳು ಮಾರನೇ ದಿನ ಮಡಿಕೇರಿ ಜಿಲ್ಲಾಸ್ಪತ್ರೆಗೆ ತೆರಳಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಸ್ಥಳೀಯ ಕೆಲವರ ವಿರುದ್ಧ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಸೋಮವಾರಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ, ಮಾದಾಪುರದಲ್ಲಿ ಮೊಬೈಲ್ ಅಂಗಡಿ ಇಟ್ಟುಕೊಂಡಿರುವ ಎಂ.ಎ. ಫಾರೂಕ್ ನೀಡಿದ ದೂರಿನಲ್ಲಿ, ಪೈಸಾರಿ ನಿವಾಸಿಯೊಬ್ಬರು ಹಣವನ್ನು ಗೂಗಲ್ಪೇ ಮಾಡಿದ್ದು, ಮಹಿಳೆಗೆ ಕೊಡುವಂತೆ ತಿಳಿಸಿದ್ದ. ಆದರೆ ಮಹಿಳೆ ವಾಹನ ಸೌಕರ್ಯವಿಲ್ಲದ್ದರಿಂದ ತಾವೇ ಬಂದು ಹಣ ನೀಡುವಂತೆ ತಿಳಿಸಿದ ಮೇರೆ ಆ ಹಣವನ್ನು ನೀಡಲು ನೌಷಾದ್ನ ಆಟೋದಲ್ಲಿ ಬಿಳಿಗೇರಿ ಗ್ರಾಮಕ್ಕೆ ತೆರಳಿದ್ದೆ.
ಅಲ್ಲಿದ್ದ ಮಹಿಳೆಗೆ ಹಣ ನೀಡಿ ವಾಪಸ್ ಆಟೋದಲ್ಲಿ ಬರುವ ಸಂದರ್ಭ ಆಟೋವನ್ನು ಅಡ್ಡಗಟ್ಟಿದ ಅಶೋಕ, ರಮೇಶ್, ಶರತ್, ಸಂದೀಪ್, ವಿನೋದ್ಕುಮಾರ್ ಸೇರಿದಂತೆ ಇತರರು, ಆ ಹೆಂಗಸಿಗೂ ನಿನಗೂ ಏನು ಸಂಬAಧ ಎಂದು ಪ್ರಶ್ನಿಸಿ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದರೊಂದಿಗೆ ಮತ್ತೆ ಗ್ರಾಮಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ೩೪೧, ೩೨೩, ೩೨೪, ೫೦೬, ೪೨೪ ಕಲಂ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಈಗಾಗಲೇ ಆರೋಪಿಗಳ ವಿರುದ್ಧ ಅತ್ಯಾಚಾರ ಯತ್ನ ಸೇರಿದಂತೆ ಕೊಲೆ ಬೆದರಿಕೆ, ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಲಾಗಿದೆ.