ವೀರಾಜಪೇಟೆ, ಮಾ. ೨೧: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದ ಶ್ರೀ ಮಲೆ ಮಹಾದೇಶ್ವರ ದೇವರ ವಾರ್ಷಿಕ ಉತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಮಗ್ಗುಲ, ಚೆಂಬೆಬೆಳ್ಳೂರು, ಕುಕ್ಲೂರು, ಐಮಂಗಲ ಗ್ರಾಮಸ್ಥರು ಆರು ದಿನಗಳ ಕಾಲ ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವದ ಅಂಗವಾಗಿ ತಾ. ೧೮ ರಂದು ದೊಡ್ಡಹಬ್ಬ ನಡೆಯಿತು. ಬೆಳಿಗ್ಗೆಯಿಂದಲೇ ಮಲೆ ಮಹಾದೇಶ್ವರನಿಗೆ ವಿಶೇಷ ಪೂಜೆಗಳು ನಡೆದು ಮಧ್ಯಾಹ್ನದ ವೇಳೆ ನೆರಪು, ಮಗ್ಗುಲ ಗ್ರಾಮದಿಂದ ಎತ್ತ್ ಪೋರಾಟ, ಕುಂದಿರ ಐನ್ ಮನೆಯಿಂದ ಭಂಡಾರ ಬರುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ದೇವರಿಗೆ ಮಹಾಪೂಜೆ, ಪ್ರಸಾದ ವಿನಿಯೋಗ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಂಜೆ ವಾದ್ಯಗೋಷ್ಠಿಯೊಂದಿಗೆ ದೇವರ ಉತ್ಸವಮೂರ್ತಿ ವೀರಾಜಪೇಟೆ ಸುಂಕದಕಟ್ಟೆಯಲ್ಲಿ ಪೂಜೆ ಸಲ್ಲಿಸಿ ಮುಖ್ಯರಸ್ತೆಯ ತೆಲುಗರ ಬೀದಿ ಮಾರಿಯಮ್ಮ ದೇವಸ್ಥಾನದಲ್ಲಿ ಪೂಜೆ ನಡೆದು, ಜೈನರ ಬೀದಿಯ ಬಸವೇಶ್ವರ ದೇವಾಲಯದಲ್ಲಿ ಸಿಡಿಮದ್ದು ಕಾರ್ಯಕ್ರಮದ ಬಳಿಕ ದೇವರಿಗೆ ವಿಶೇಷ ಪೂಜೆ ನಡೆಯಿತು. ನಂತರ ಮುಖ್ಯರಸ್ತೆಯಲ್ಲಿರುವ ಶ್ರೀ ಮಹಾಗಣಪತಿ ದೇವಾಲಯದ ಬಳಿಯಿರುವ ಕೃಷ್ಣಸ್ಟೋರ್ ಪಕ್ಕದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇವಾಂಗ ಬೀದಿಯಲ್ಲಿರುವ ಶ್ರೀ ಪಾರ್ವತಿ ದೇವಸ್ಥಾನದಲ್ಲಿ ಪೂಜೆ ನಡೆದು ನಂತರ ದೇವರ ಉತ್ಸವ ಮೂರ್ತಿ ಹಿಂದಿರುಗಿ ಮಲೆತಿರಿಕೆ ಬೆಟ್ಟದ ಮಲೆ ಮಹಾದೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.

ತಾ. ೧೯ ರಂದು ಸಂಜೆ ದೇವರ ಅವಭೃತ ಸ್ನಾನ, ರಾತ್ರಿ ದೇವರ ನೃತ್ಯ, ತಾ. ೨೦ ಬೆಳಿಗ್ಗೆ ಕೊಡಿಮರ ಇಳಿಸುವುದು (ಕಳಮಡಕವೊ) ಅಪರಾಹ್ನ ಮಹಾಪೂಜೆ ಬಳಿಕ ಅನ್ನ ಸಂತರ್ಪಣೆ ನಡೆಯಿತು.

ಉತ್ಸವದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದಿಂದಲೂ ಭಕ್ತಾದಿಗಳು ನೆರೆದಿದ್ದರು. ದೇವಾಲಯದ ಟ್ರಸ್ಟ್ನ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಜರಿದ್ದರು.