ಚೆಟ್ಟಳ್ಳಿ, ಮಾ. ೨೧: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ತಾ. ೨೩ ರಂದು ನಡೆಸಲು ಅಧ್ಯಕ್ಷ ಪಿ.ಟಿ. ಮುತ್ತಪ್ಪ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

ತೆರೆದ ಟೆಂಡರ್ ಬದಲಿಗೆ ಮುಚ್ಚಿದ ಲಕೋಟೆಯ ಟೆಂಡರ್ ಪ್ರಕ್ರಿಯೆಯನ್ನು ನಡೆಸುವಂತೆ ಹಾಗೂ ನಿಯಮದಂತೆ ೨.೩೦ ಲಕ್ಷಕ್ಕೆ ಮೇಲ್ಪಟ್ಟು ಟೆಂಡರ್ ನಿಗದಿಪಡಿಸಲಾಗಿದೆ.

ಮಾಂಸ ಮಳಿಗೆಗೆ ಟೆಂಡರ್ ನೀಡುತ್ತಿರುವುದಕ್ಕೆ ವರ್ತಕರ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಟೆಂಡರ್ ಬದಲು ಲೈಸನ್ಸ್ ನೀಡುವಂತೆ ವ್ಯಾಪಾರಿಗಳು ಆಗ್ರಹಿಸಿದ್ದಾರೆ. ಭಾರಿ ಮೊತ್ತದ ಟೆಂಡರ್ ಪಡೆದು ಅಷ್ಟು ಲಾಭ ಪಡೆಯುವುದು ಅಸಾಧ್ಯವಾಗಿದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.

ಕೋಳಿ ಮಳಿಗೆಯ ಟೆಂಡರ್ ಪ್ರಕ್ರಿಯೆಯಲ್ಲಿ ನಡೆಯದ ಹಿನ್ನೆಲೆ ಪಂಚಾಯಿತಿ ಸದಸ್ಯರ ಸಭೆಯ ತೀರ್ಮಾನದಂತೆ ತಾ. ೨೩ ರಂದು ಮರು ಟೆಂಡರ್ ನಡೆಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಪಿ.ಟಿ. ಮುತ್ತಪ್ಪ ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಪಂಚಾಯಿತಿಯ ಕೋಳಿ ಮಾಂಸ ವ್ಯಾಪಾರ ಮಳಿಗೆಗೆ ಟೆಂಡರ್ ಪ್ರಕ್ರಿಯೆ ನಡೆಯುತಿದ್ದು, ಪಂಚಾಯಿತಿ ನಿಯಮ ಮೀರಿ ಲೈಸೆನ್ಸ್ ನೀಡಲು ಸಾಧ್ಯವಿಲ್ಲ ಎಂದು ಅಭಿವೃದ್ಧಿ ಅಧಿಕಾರಿ ರಾಕೇಶ್ ಪ್ರತಿಕ್ರಿಯಿಸಿದ್ದಾರೆ.