ಶ್ರೀಮಂಗಲ, ಮಾ. ೨೧: ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಮಾನ್ಯತೆ ಪಡೆದ, ಕೊಡವ ಒಕ್ಕಡೊಕ್ಕಡ ಕೇರ್ ಬಲಿಪ ನಮ್ಮೆ ಚೆಟ್ಟಂಗಡ ಕಪ್ ೨೦೨೩ ಕ್ಕೆ "ಕೇರ್ ಪೂಜೆ" ನೆಮ್ಮಲೆ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಜರುಗಿತು.

ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಉತ್ಸವದ ಎರಡನೇ ವರ್ಷದ ಆತಿಥ್ಯ ವಹಿಸಿಕೊಂಡಿರುವ ನೆಮ್ಮಲೆ ಗ್ರಾಮದ ಚೆಟ್ಟಂಗಡ ಕುಟುಂಬವು ಹಗ್ಗಜಗ್ಗಾಟ ಪಂದ್ಯಾವಳಿಗೆAದೇ ಕೇರಳ ರಾಜ್ಯದ ಪರಿಣಿತ ಹಗ್ಗ ತಯಾರಿಸುವವರಿಂದ ವಿಶೇಷವಾಗಿ ತಯಾರಿಸಿ ತಂದಿರುವ ಹಗ್ಗಗಳಿಗೆ ಕುಟುಂಬದ ಹಿರಿಯರು, ಅಧ್ಯಕ್ಷ, ಆಡಳಿತ ಮಂಡಳಿ ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಿ ಕೇರ್ ಬಲಿಪ ನಮ್ಮೆ ಯಶಸ್ವಿಯಾಗಲೆಂದು ಪ್ರಾರ್ಥಿಸಲಾಯಿತು.

ಆರಂಭದಲ್ಲಿ ಚೆಟ್ಟಂಗಡ ಕುಟುಂಬದ ಗುರುಕಾರೋಣರ ಸನ್ನಿಧಿಯಾದ ಕೈಮಡದಲ್ಲಿ ನೂತನವಾಗಿ ತಯಾರಿಸಿದ ಹಗ್ಗಗಳನ್ನಿಟ್ಟು ಒಕ್ಕಣೆ ಕಟ್ಟಿ ಚೆಟ್ಟಂಗಡ ಕುಟುಂಬದ ಗುರುಕಾರೋಣರನ್ನು ಪ್ರಾರ್ಥಿಸಿ ನಂತರ ಗ್ರಾಮ ದೇವತೆ ದುರ್ಗಾ ಪರಮೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಲಾಯಿತು. ನಮ್ಮೆಗೆ ಕುಟುಂಬದ ಹೆಸರು ನೋಂದಾಯಿಸಿ ಕೊಳ್ಳಲು ತಾ. ೨೪ ಕೊನೆಯ ದಿನವಾಗಿ ನಿಗದಿಪಡಿಸಲಾಯಿತು.