* ಅ.ಕೊ.ಸ. ದಿಂದ ಆಗ್ರಹ
* ಕೊಡಗರು ಬದಲಿಗೆ - ಕೊಡವ ಬಳಕೆಗೆ ಕೋರಿಕೆ
ಮಡಿಕೇರಿ, ಮಾ. ೨೧: ರಾಜ್ಯ ಸರಕಾರ ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಣೆ ಮಾಡಿರುವ ರಾಜ್ಯ ಸರಕಾರದ ಕ್ರಮವನ್ನು ಅಖಿಲ ಕೊಡವ ಸಮಾಜ ಹಾಗೂ ಅ.ಕೊ.ಸ. ಯೂತ್ವಿಂಗ್ ಸ್ವಾಗತಿಸಿದೆ. ಈ ಬೇಡಿಕೆ ಈಡೇರಿರುವುದು ಸಂತಸಕರವಾಗಿದೆ. ಆದರೆ, ಸರಕಾರದ ಮೂಲಕ ಹೊರಡಿಸಲಾಗಿರುವ ಆದೇಶದಲ್ಲಿ ಕೊಡಗರು ಸಮುದಾಯದವರ, ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ ಎಂಬದಾಗಿ ಉಲ್ಲೇಖಿಸಲಾಗಿದೆ. ಇದು ಸರಿಯಲ್ಲ ಕೊಡಗರು ಎಂಬ ಜನಾಂಗವೇ ಅಸ್ತಿತ್ವದಲ್ಲಿಲ್ಲ ಎಂಬ ಬಗ್ಗೆ ಸರಕಾರ ಹಾಗೂ ಅಧಿಕಾರಿಗಳು ತಿಳಿದುಕೊಳ್ಳಬೇಕಿದೆ ಎಂದು ಸಮಾಜ ಪ್ರಮುಖರು ಒತ್ತಾಯಿಸಿದ್ದಾರೆ.
ಈ ಕುರಿತು ಅ.ಕೊ.ಸ.ದ ಅಧ್ಯಕ್ಷ ಪರದಂಡ ಸುಬ್ರಮಣಿ ಹಾಗೂ ಯೂತ್ವಿಂಗ್ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಜಂಟಿ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗೆ ನಾಪೋಕ್ಲುವಿನಲ್ಲಿ ನಡೆದ ಅಪ್ಪಚೆಟ್ಟೊಳಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಯಂತೆ ಕೊಡವ ಅಭಿವೃದ್ಧಿ ನಿಗಮವನ್ನು ಅಧಿಕೃತವಾಗಿ ಘೋಷಿಸುವ ಮೂಲಕ ನುಡಿದಂತೆ ನಡೆದಿದ್ದಾರೆ.
ಇದರ ಯಶಸ್ಸಿನ ಹಿಂದೆ ಹಗಲಿರುಳು ಶ್ರಮಿಸಿರುವ ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಹಾಗೂ ಬಳಗದ ಶ್ರಮ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದವರಿಗೆ ಜನಾಂಗ ಅಬಾರಿಯಾಗಿದೆ. ಜನಸಂಖ್ಯೆಯ ಆಧಾರವನ್ನು ಹಾಗೂ ಆರ್ಥಿಕವಾಗಿ ತೆಗೆದುಕೊಂಡರೆ ಕೊಡವರು ಅಳಿವಿನಂಚಿನಲ್ಲಿರುವ ಜನಾಂಗವಾಗಿದೆ.
ಇದೀಗ ತಡವಾಗಿ ಆದರೂ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಅಳಿವಿನಂಚಿನಲ್ಲಿರುವ ಕೊಡವ ಜನಾಂಗದ ರಕ್ಷಣೆಗೆ ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ ಎಂದು ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಕೊಡವ ಅಭಿವೃದ್ಧಿ ನಿಗಮದ ಮೂಲಕ ಕೊಡವ ಜನಾಂಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸೇರಿದಂತೆ ಕೊಡವರ ಸರ್ವಾಂಗೀಣ ಅಭಿವೃದ್ಧಿ ಸರಕಾರ ಒತ್ತು ನೀಡಬೇಕಿದೆ, ಇದರ ಜೊತೆ ಜೊತೆಗೆ ಕೊಡಗರು ಎಂದಿರುವ ಸರಕಾರದ ಎಲ್ಲಾ ದಾಖಲೆಗಳನ್ನು ತಿದ್ದುಪಡಿ ಮಾಡಿ ‘ಕೊಡವರು’ ಎಂಬ ಆದೇಶವನ್ನು ಹೊರಡಿಸಬೇಕಿದೆ ಎಂದು ಅವರು ಮನವಿ ಮಾಡಿದ್ದಾರೆ.