ಮಡಿಕೇರಿ ಮಾ.೨೦: ಜಂಟಿ ಮುಖ್ಯ ಚುನಾವಣಾಧಿಕಾರಿ ಅವರ ಪತ್ರದಂತೆ ದಿನಾಂಕ ೨೮/೦೨/೨೦೨೩ ರಲ್ಲಿ ನೀಡಿರುವ ನಿರ್ದೇಶನಗಳ ಅನ್ವಯ ಕೊಡಗು ಜಿಲ್ಲೆಯ ಪ್ಲಾಂಟೇಷನ್ ಎಸ್ಟೇಟ್‌ಗಳ ಲೈನ್-ಮನೆಗಳಲ್ಲಿ ವಾಸವಾಗಿರುವ ಕಾರ್ಮಿಕರು ಮತದಾರರ ಪಟ್ಟಿಯಲ್ಲಿ ನೋಂದಾಯಿತರಾಗಿರುವ ಕುರಿತು ಪರಿಶೀಲನೆ ಮಾಡುವ ಸಲುವಾಗಿ ಕಂದಾಯ ಇಲಾಖೆ, ಗ್ರಾಮೀಣಾಭಿವೃಧ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಿ ಜಿಲ್ಲೆಯ ಪ್ಲಾಂಟೇಷನ್ ಎಸ್ಟೇಟ್‌ಗಳ ೯೬೩ ಲೈನ್-ಮನೆಗಳನ್ನು ಪರಿಶೀಲಿಸಲಾಗಿದೆ.

ಈಗಾಗಲೇ ನೋಂದಾಯಿತರಾಗಿರುವ ಮಾಹಿತಿಯನ್ನು ಪುನರ್ ಪರಿಶೀಲಿಸಲಾಗಿದೆ ಮತ್ತು ಸೇರ್ಪಡೆಗೆ ಕೈಬಿಟ್ಟು ಹೋಗಿರುವ, ಪ್ರಜಾಪ್ರತಿನಿಧಿ ಕಾಯ್ದೆ ೧೯೫೦ ರ ಕಲಂ ೧೯ ಮತ್ತು ೨೦ ರ ಅನ್ವಯ ಅರ್ಹತೆ ಹೊಂದಿರುವ ಮತದಾರರನ್ನು ಮಾತ್ರ ಮತದಾರರ ನೋಂದಣಿ ನಿಯಮಗಳು ೧೯೬೦ ರ ನಿಯಮ ೧೩(೧) ಹಾಗೂ ೨೬ ಗಳನ್ನು ಪಾಲಿಸಿಕೊಂಡು ನಮೂನೆ ೬ ರಲ್ಲಿ ಅರ್ಜಿ ಸ್ವೀಕರಿಸಿ ಸ್ಥಳೀಯ ಮತಗಟ್ಟೆ ವ್ಯಾಪ್ತಿಯ ಬಿಎಲ್‌ಒ ಮೂಲಕ ಪರಿಶೀಲನೆ ನಡೆಸಿದ ನಂತರವಷ್ಟೇ ಮತದಾರರ ಪಟ್ಟಿಗೆ ಸೇರಿಸುವ ಕುರಿತು ಕ್ರಮವಹಿಸಲಾಗುತ್ತಿದೆ. ಯಾವುದೇ ಅಕ್ರಮ ವಲಸಿಗರನ್ನು ಅಥವಾ ಸ್ಥಳೀಯ ನಿವಾಸಿಗಳಲ್ಲದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿಲ್ಲ ಮತ್ತು ಮುಂದೆಯೂ ಮಾಡಲಾಗುವುದಿಲ್ಲ ಎಂದು ಉಪ ವಿಭಾಗಾಧಿಕಾರಿ ಹಾಗೂ ಮತದಾರರ ನೋಂದಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರು ತಿಳಿಸಿದ್ದಾರೆ.