ವೀರಾಜಪೇಟೆ, ಮಾ. ೨೦: ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಕೇಂದ್ರ ಸರಕಾರದಿಂದ ಬರಬೇಕಾಗಿದ್ದ ೧೫ ಲಕ್ಷ ಕೊಟಿ, ರಾಜ್ಯ ಸರಕಾರದ ೩ ಲಕ್ಷ ಕೋಟಿ ಅನುದಾನವನ್ನು ಸರಕಾರಗಳು ಬಳಸಿಕೊಂಡು ಕಾರ್ಮಿಕರಿಗೆ ನೀಡದೆ ಲೂಟಿಮಾಡುತ್ತಿವೆ ಎಂದು ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎಂ. ಮಹಾಂತೇಶ್ ಹೇಳಿದರು.
ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಸಿಐಟಿಯ ಸಂಘಟನೆ ವತಿಯಿಂದ ವೀರಾಜಪೇಟೆ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ಚುನಾವಣೆ ನಡೆಸಲು ಸರಕಾರ ತಯಾರಿ ನಡೆಸುತ್ತಿದೆ. ಆದರೆ ಕಾರ್ಮಿಕ ಬಂಧುಗಳು ಚುನಾವಣೆಯಲ್ಲಿ ಹಣಕ್ಕೆ ಮತವನ್ನು ಮಾರಿಕೊಳ್ಳಬೇಡಿ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರಿಗೆ, ಸಣ್ಣ ರೈತರಿಗೆ ಭದ್ರತೆ ಇಲ್ಲದಂತಾಗಿದ್ದು, ಅನೇಕರಿಗೆ ಮೂಲ ಸೌಲಭ್ಯಗಳು ದೊರಕಿಲ್ಲ. ಕೇಂದ್ರ ಸರಕಾರ ಹಣ ಉಳ್ಳವರಿಗೆ ಅನುಕೂಲ ಮಾಡುತ್ತಿದೆ. ಕಾರ್ಮಿಕರ ಬಿಕ್ಕಟ್ಟು, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಕೊರತೆ ಇರುವುದರಿಂದ ಉದ್ಯೋಗವನ್ನು ಆರಿಸಿಕೊಂಡು ನಗರಗಳಿಗೆ ಹೋಗುವ ಪರಿಸ್ಥಿತಿ ಬಂದಿದೆ, ಈ ಹಿನ್ನೆಲೆಯಲ್ಲಿ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಬೇಕು. ರೈತರ ಹಕ್ಕುಗಳಿಗಾಗಿ ಒತ್ತಾಯಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಏಪ್ರಿಲ್ ೫ ರಂದು ಬೃಹತ್ ಸಂಸತ್ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಾರ್ಮಿಕರು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು.
ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಎ.ಸಿ.ಸಾಬು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಹಾರ ಸಾಮಗ್ರಿಗಳ ಬೆಲೆ ಹೆಚ್ಚಾಗುತ್ತಿರುವುದರಿಂದ ಬಡ ಕಾರ್ಮಿಕರು, ಜನಸಾಮಾನ್ಯರು ಜೀವನ ನಡೆಸುವುದೇ ಸಮಸ್ಯೆಯಾಗಿದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಅಡಿಗೆ ಅನಿಲಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ, ಕಾಡಾನೆಗಳ ದಾಳಿಯಿಂದ ಕೊಡಗಿನ ರೈತರು ಭತ್ತದ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ, ಈ ಎಲ್ಲಾ ಸಮಸ್ಯೆಗಳಿಗೆ ಮುಂದಿನ ದಿನದಲ್ಲಿ ಕಾರ್ಮಿಕ ಸಂಘಟನೆಯಿAದ ಹೋರಾಟ ನಡೆಸುವುದಾಗಿ ಹೇಳಿದರು.
ವೇದಿಕೆಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರತೀಶ್, ಸಹ ಕಾರ್ಯದರ್ಶಿ ಮುರುಗೇಶ್, ಉಪಾಧ್ಯಕ್ಷೆ ಉಷಾ, ರಜೀಶ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಪೊನ್ನಂಪೇಟೆ, ವೀರಾಜಪೇಟೆ, ಕುಶಾಲನಗರದಿಂದ ಕಟ್ಟಡ ಕಾರ್ಮಿಕರು ಭಾಗವಹಿಸಿದ್ದರು.