ಮಡಿಕೇರಿ, ಮಾ. ೨೦: ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗೆ ಇನ್ನೇನೂ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಕಾವೇರಿ ತವರು ನಾಡಿನಲ್ಲಿ ಕೂಡ ದಿನದಿಂದ ದಿನಕ್ಕೆ ರಾಜಕೀಯ ಚಟುವಟಿಕೆಗಳು ಬಿರುಸಿ ನಿಂದ ಸಾಗುತ್ತಿದೆ. ಪಕ್ಷಗಳು ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದ್ದಾರೆ.
ಮಡಿಕೇರಿ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ. ಅಭ್ಯರ್ಥಿ ಮಡಿಕೇರಿ ನಗರಸಭಾ ಸದಸ್ಯ ಅಮೀನ್ ಮೊಹಸ್ಸೀನ್ ಅವರು ಸ್ಪರ್ಧಿಸುತ್ತಿದ್ದಾರೆ. ಎಸ್.ಡಿ.ಪಿ.ಐ ಸ್ಪರ್ಧೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಮಡಿಕೇರಿ ನಗರಸಭೆಯಲ್ಲಿ ಐದು ಸದಸ್ಯರ ಬಲವನ್ನೊಂದಿರುವ ಎಸ್.ಡಿ.ಪಿ.ಐ. ವಿರೋಧ ಪಕ್ಷದ ಸ್ಥಾನದಲ್ಲಿ ಇದೆ.
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಎಸ್.ಡಿ.ಪಿ.ಐ. ಸ್ಪರ್ಧಿಸದೆ ಜಾತ್ಯತೀತ ಸಿದ್ದಾಂತ ಹೊಂದಿರುವ ಪಕ್ಷಕ್ಕೆ ಬೆಂಬಲ ಸೂಚಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಮತಗಳ ಮೇಲೆ ಎಸ್.ಡಿ.ಪಿ.ಐ ಕಣ್ಣಿಟ್ಟಿದೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೩೫ ಸಾವಿರಕ್ಕೂ ಅಧಿಕ ಅಲ್ಪಸಂಖ್ಯಾತ ಮತಗಳು ಇದ್ದು ಇದರಲ್ಲಿ ೨೯ ರಿಂದ ೩೦ ಸಾವಿರ ಮುಸ್ಲಿಂ ಮತದಾರರು ಇದ್ದಾರೆ. ಕನಿಷ್ಟ ೨೫ ಸಾವಿರ ಮುಸ್ಲಿಂ ಮತಗಳು ಚಲಾವಣೆಯಾಗುವ ನಿರೀಕ್ಷೆ ಇದೆ.
ಎಸ್.ಡಿ.ಪಿ.ಐ ೧೫ ರಿಂದ ೨೦ ಸಾವಿರ ಮುಸ್ಲಿಂ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಸಿದ್ಧತೆಯಲ್ಲಿ, ಮಡಿಕೇರಿ ಕ್ಷೇತ್ರದಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದೆ.
ಎಸ್.ಡಿ.ಪಿ.ಐ. ಸ್ಪರ್ಧೆ ಯಾರಿಗೆ ನಷ್ಟ! ಯಾರಿಗೆ ಲಾಭ!
ಮಡಿಕೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಎಸ್.ಡಿ.ಪಿ.ಐ ಸ್ಪರ್ಧೆ ಯಾರಿಗೆ ನಷ್ಟ! ಯಾರಿಗೆ ಲಾಭ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.
ಎಸ್.ಡಿ.ಪಿ.ಐ. ಅಭ್ಯರ್ಥಿ ಅಮೀನ್ ಮೊಹಸ್ಸೀನ್ ಮಡಿಕೇರಿ ನಗರಸಭಾ ಸದಸ್ಯರಾಗಿದ್ದು, ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತುವಲ್ಲಿ ಸಫಲರಾದ ನಾಯಕರಲ್ಲಿ ಒಬ್ಬರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಮೊಹಸ್ಸೀನ್ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಕಾAಗ್ರೆಸ್ ಸಾಂಪ್ರದಾಯಿಕ ಮತದಾರರಾಗಿರುವ ಮುಸ್ಲಿಂ ಸಮುದಾಯ ದವರಿಗೆ ಕಾಂಗ್ರೆಸ್ ಯಾವುದೇ ದೊಡ್ಡ ಹುದ್ದೆಗಳು ನೀಡಲಿಲ್ಲ ಎಂಬ ಬೇಸರ ಕೊಡಗು ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಮೇಲೆ ಇದ್ದು, ಆದರೆ ಇದುವರೆಗೆ ಕೊಡಗಿನಲ್ಲಿ ಕಾಂಗ್ರೆಸ್ ಮುಸ್ಲಿಂ ಮುಖಂಡರು ಬಹಿರಂಗವಾಗಿ ಬೇಸರ ಹೊರಹಾಕಲು ಸಾಧ್ಯವಾಗಲಿಲ್ಲ. ಏತನ್ಮಧ್ಯೆ ಎಸ್.ಡಿ.ಪಿ.ಐ. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಶಕ್ತಿ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದೆ.
ಅಲ್ಪಸಂಖ್ಯಾತರು, ಮುಸ್ಲಿಂ ಹಾಗೂ ದಲಿತರ ಪರ ಬೀದಿಗಳಿದು ಹೋರಾಟ ಮಾಡುವಲ್ಲಿ ಎಸ್.ಡಿ.ಪಿ.ಐ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕಿಂತ ಒಂದು ಕೈ ಮುಂದಿದೆ.
ರಾಜ್ಯದಲ್ಲಿ ನಡೆದ ಮುಸ್ಲಿಂಮರ ಮೇಲೆ ನಡೆದಿರುವ ಕೆಲವೊಂದು ಘಟನೆಗಳಿಗೆ ಕೊಡಗು ಕಾಂಗ್ರೆಸ್ ಮುಖಂಡರು ಮೌನವಾಗಿ ಕುಳಿತಿದ್ದರು. ಇದರ ಲಾಭವನ್ನೂ ಕೂಡ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಪಡೆಯುವ ಸಾಧ್ಯತೆ ಇದೆ.
ಎಸ್.ಡಿ.ಪಿ.ಐ ಅಭ್ಯರ್ಥಿ ಪಡೆಯುವ ಮತಗಳ ಲೆಕ್ಕಾಚಾರದ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಸೋಲು -ಗೆಲುವಿನ ಭವಿಷ್ಯ ಅಡಗಿದೆ.
ಎಸ್.ಡಿ.ಪಿ.ಐ. ಮತಗಳ ಮೇಲೆ ನಿರ್ಧಾರವಾಗಲಿದೆ ಸೋಲು-ಗೆಲುವಿನ ಅಂತರ!
ಅತೀ ಹೆಚ್ಚು ಮುಸ್ಲಿಂ ಮತದಾರರು ಇರುವ ವೀರಾಜಪೇಟೆ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ. ಸ್ಪರ್ಧಿಸದೆ ತಟಸ್ಥವಾಗಿ ಉಳಿಯುವ ಸಾಧ್ಯತೆ ಇದೆ. ಮಡಿಕೇರಿ ಕ್ಷೇತ್ರದಲ್ಲಿ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಮಡಿಕೇರಿ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ. ಸ್ಪರ್ಧೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಎಸ್.ಡಿ.ಪಿ.ಐ. ಮಡಿಕೇರಿ ಕ್ಷೇತ್ರದಲ್ಲಿ ಕನಿಷ್ಟ ೫ ಸಾವಿರ ಮತಗಳು ಪಡೆದರೂ ಸಹಾ ಸೋಲು-ಗೆಲುವಿನ ಲೆಕ್ಕಾಚಾರ ಎಸ್.ಡಿ.ಪಿ.ಐ. ಪಡೆಯುವ ಮತಗಳಲ್ಲಿ ನಿರ್ಧರವಾಗಲಿದೆ. ಎಸ್.ಡಿ.ಪಿ.ಐ. ಮಡಿಕೇರಿ ಕ್ಷೇತ್ರದ ಕೆಲವೊಂದು ಗ್ರಾಮ ಪಂಚಾಯತಿಗಳಲ್ಲಿ ಬಲಿಷ್ಠ ಕಾರ್ಯಕರ್ತರ ಪಡೆಯನ್ನೇ ಹೊಂದಿವೆ. ಎಸ್.ಡಿ.ಪಿ.ಐ. ಬಿಜೆಪಿ ಬಿ ಟೀಮ್ ಎಂದು ಹೇಳಿ ಕಾಂಗ್ರೆಸ್ ಮುಸ್ಲಿಂ ಮತಗಳನ್ನು ಪಡೆಯುವ ಲೆಕ್ಕಾಚಾರದಲ್ಲಿದೆ.
-ಕೆ. ಎಂ. ಇಸ್ಮಾಯಿಲ್, ಕಂಡಕೆರೆ