ಮಡಿಕೇರಿ, ಮಾ. ೨೦: ಸತ್ಪçಜೆಗಳನ್ನು ರೂಪಿಸುವ ಹೊಣೆಗಾರಿಕೆಯುಳ್ಳ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಎಂದಿಗೂ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಹಿರಿಯ ಚಿಂತಕ, ವೈದ್ಯ ಡಾ. ಎಂ.ಜಿ. ಪಾಟ್ಕರ್ ಅಭಿಪ್ರಾಯಪಟ್ಟರು.
ಕೂಡಿಗೆ ಕ್ರೀಡಾಶಾಲೆಯಲ್ಲಿ ೩೬ ವರ್ಷಗಳ ಸೇವೆ ಸಲ್ಲಿಸಿದ್ದ ಕುಂತಿ ಬೋಪಯ್ಯ ಅವರ ಕುರಿತ ಸಾಕ್ಷö್ಯ ಚಿತ್ರ ಕುಂತಿ ಟೀಚರ್ ಅನ್ನು ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡಿದ ಡಾ. ಎಂ.ಜಿ. ಪಾಟ್ಕರ್, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳಿ, ಸಂಸ್ಕಾರ ಕಲಿಸಿದ ಶಿಕ್ಷಕರು ನಿವೃತ್ತಿಯಾಗುವುದು ಸೇವಾ ದಾಖಲೆಗೆ ಮಾತ್ರವೇ ಆಗಿದ್ದು ನಿಜವಾದ ಅರ್ಥದಲ್ಲಿ ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿಯೇ ಇರುವ ಶಿಕ್ಷಕರಿಗೆ ನಿವೃತ್ತಿ ಎಂಬುದೇ ಇಲ್ಲ ಎಂದರು. ಪ್ರತಿಯೋರ್ವರ ಜೀವನದಲ್ಲಿಯೂ ಓರ್ವ ಆದರ್ಶ ಶಿಕ್ಷಕ ಪ್ರಮುಖ ಪಾತ್ರ ವಹಿಸಿರುತ್ತಾನೆ ಎಂದು ಪಾಟ್ಕರ್ ಹೇಳಿದರು.
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಕೂಡಿಗೆ ಕ್ರೀಡಾಶಾಲೆಯಲ್ಲಿ ಮಹತ್ತರ ಸಾಧನೆ ಮಾಡಿ ಸಾಧನೆಯ ಬಗ್ಗೆ ಪ್ರಚಾರದಿಂದ ದೂರವಾಗಿ ಎಲೆಮರೆಯ ಹೂವಿನಂತೆ ಕುಂತಿ ಬೋಪಯ್ಯ ೩೬ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ರಾಜಕೀಯದಿಂದ ಸಾಕಷ್ಟು ಅಂತರ ಕಾಯ್ದುಕೊಂಡು ತಾನೋರ್ವ ಸರ್ಕಾರಿ ಸೇವಕಿ ಎಂಬAತೆ ಕಾರ್ಯನಿರ್ವಹಿಸಿ ಸಾವಿರಾರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಕುಂತಿ ಕಾರಣರಾಗಿದ್ದಾರೆ. ಇವರಿಗೆ ರಾಜ್ಯಮಟ್ಟದ ಪ್ರಶಸ್ತಿ ಮಾತ್ರವಲ್ಲ ರಾಷ್ಟçಮಟ್ಟದ ಪ್ರಶಸ್ತಿ ದೊರಕುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೂಡಿಗೆ ಕ್ರೀಡಾಶಾಲೆಯಲ್ಲಿ ಶಿಕ್ಷಕಿ, ಪ್ರಾಂಶುಪಾಲೆಯಾಗಿ ನಿವೃತ್ತಿಯಾದ ಕುಂತಿ ಬೋಪಯ್ಯ ಮಾತನಾಡಿ, ಶಿಕ್ಷಕ ವರ್ಗಕ್ಕೆ ಈ ಮೊದಲು ದೊರಕುತ್ತಿದ್ದ ಗೌರವ ಇಂದಿನ ದಿನಗಳಲ್ಲಿ ದೊರಕುತ್ತಿಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಕರ ಬಗ್ಗೆ ಪ್ರೀತಿ, ವಿಶ್ವಾಸ ಕಡಮೆಯಾಗುತ್ತಲೇ ಇದೆ ಎಂದು ವಿಷಾದ ವ್ಯಕ್ತಪಡಿಸಿದರು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಕುಂತಿ ಟೀಚರ್ ಸಾಕ್ಷö್ಯ ಚಿತ್ರ ನಿರ್ದೇಶಕ ಪತ್ರಕರ್ತ ಅನಿಲ್ ಎಚ್.ಟಿ. ಮಾತನಾಡಿ. ತನ್ನ ಪಾಡಿಗೆ ತಾವು ೩೬ ವರ್ಷಗಳ ಕಾಲ ಕ್ರೀಡಾಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಆ ಶಾಲೆಯ ಏಳಿಗೆಗೆ ಶ್ರಮಿಸಿದ ಕುಂತಿ ಅವರ ಸಾಧನೆ ಜತೆಗೇ ರಾಜ್ಯದ ಸುಸಜ್ಜಿತ ಕ್ರೀಡಾಶಾಲೆಯ ಬಗ್ಗೆ ಸಾಕ್ಷö್ಯ ಚಿತ್ರದಲ್ಲಿ ಮಾಹಿತಿ ನೀಡಲಾಗಿದೆ. ಕೊಡಗಿಗೆ ಕೂಡಿಗೆ ಕ್ರೀಡಾಶಾಲೆ ಖಂಡಿತವಾಗಿಯೂ ಪ್ರತಿಷ್ಠೆಯ ಶಾಲೆಯಾಗಿದೆ. ಹೀಗಾಗಿ ಸಾಕ್ಷö್ಯ ಚಿತ್ರದಲ್ಲಿ ಕೂಡಿಗೆ ಕ್ರೀಡಾಶಾಲೆಯ ಬೆಳವಣಿಗೆಯನ್ನೂ ದಾಖಲಿಸಲಾಗಿದೆ ಎಂದರು.
ಮಡಿಕೇರಿ ನಗರಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಸ್ನೇಹಮಯಿ ಗೃಹಿಣಿಯಾಗಿ, ೩೬ ವರ್ಷಗಳ ಕಾಲ ಮಡಿಕೇರಿಯಿಂದ ಕೂಡಿಗೆಗೆ ಪ್ರತಿನಿತ್ಯ ತೆರಳಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ಕಲಿಸಿದ ಕುಂತಿ ಬೋಪಯ್ಯ ಅವರ ಸಾಧನೆ ಈ ಸಾಕ್ಷö್ಯ ಚಿತ್ರದ ಮೂಲಕ ದಾಖಲಾಗಿರುವುದು ಶ್ಲಾಘನೀಯ ಕಾರ್ಯ ಎಂದು ಪ್ರಶಂಶಿಸಿದರು.
ವೀರಾಜಪೇಟೆಯ ಸಮಾಜ ಸೇವಕಿ ಕಾಂತಿ ಸತೀಶ್ ಮಾತನಾಡಿ, ಓರ್ವ ತಾಯಿಯಾಗಿ, ಓರ್ವ ಶಿಕ್ಷಕಿಯಾಗಿ, ಓರ್ವ ಪತ್ನಿಯಾಗಿ, ಓರ್ವ ಮಹಿಳೆಯಾಗಿ ಹೇಗಿರಬೇಕು ಎಂಬುದಕ್ಕೆ ಕುಂತಿ ಅವರು ಮಾದರಿಯಾಗಿದ್ದಾರೆ ಎಂದರು.
ಕೂಡಿಗೆ ಕ್ರೀಡಾಶಾಲೆಯ ಪ್ರಾಂಶುಪಾಲ ದೇವಕುಮಾರ್ ಮಾತನಾಡಿ, ಒಂದು ದಿನವೂ ರಜೆ ಪಡೆಯದೆ ಕ್ರೀಡಾಶಾಲೆಗೆ ೩೬ ವರ್ಷಗಳ ಕಾಲ ಬಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಸಂಸ್ಕಾರಯುತ ಶಿಕ್ಷಣ ನೀಡಿದ್ದ ಕುಂತಿ ಬೋಪಯ್ಯ ಅವರ ಆದರ್ಶವನ್ನು ಭವಿಷ್ಯದಲ್ಲಿಯೂ ಕ್ರೀಡಾಶಾಲೆಯಲ್ಲಿ ಮುಂದುವರೆಸಲಾಗುತ್ತದೆ ಎಂದು ಭರವಸೆ ನೀಡಿದರು.
ಕ್ರೀಡಾ ಇಲಾಖೆಯ ತರಬೇತುದಾರ ಅಂತೋಣಿ ಡಿಸೋಜಾ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕ್ರೀಡಾ ಸಾಧನೆಗಾಗಿ ರಾಷ್ಟçಪ್ರಶಸ್ತಿ ಪಡೆದ ತನ್ನನ್ನು ಗುರುತಿಸಿ ಕ್ರೀಡಾಶಾಲೆಯಲ್ಲಿ ಕ್ರೀಡಾತರಬೇತುದಾರನನ್ನಾಗಿಸಿ ನೂರಾರು ಸಾಧಕರಿಗೆ ತರಬೇತಿ ನೀಡಲು ಅವಕಾಶ ನೀಡಿದ ಕುಂತಿ ಅವರು ಜೀವನದಲ್ಲಿ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ ಎಂದರು.
ಸಾಕ್ಷö್ಯ ಚಿತ್ರ ನಿರ್ಮಿಸಿ, ನಿರ್ದೇಶಿಸಿದ ಹಿರಿಯ ಪತ್ರಕರ್ತ ಅನಿಲ್ ಎಚ್.ಟಿ. ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಉಪನ್ಯಾಸಕಿ ಕೆ. ಜಯಲಕ್ಷ್ಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಶ್ವಿನಿ ಕಿರಣ್ ಕುಮಾರ್ ವಂದಿಸಿದರು. ಕುಂತಿ ಅವರ ಪತಿ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಹಾಜರಿದ್ದರು.