ಗೋಣಿಕೊಪ್ಪಲು, ಮಾ. ೨೦ : ಮುಂದಿನ ಚುನಾವಣೆಯಲ್ಲಿ ನಾನಾ ರೂಪದ ಆಮಿಷಗಳು ಆದಿವಾಸಿಗಳ ಬಳಿ ಬರಲಿವೆ; ಇದಕ್ಕೆ ಮುಗ್ಧ ಗಿರಿಜನರು ಬಲಿಯಾಗದಂತೆ ಎಚ್ಚರ ವಹಿಸಬೇಕು.
ಈ ದೇಶವನ್ನು ಸುಭದ್ರವಾಗಿ ಕಟ್ಟಲು ನಾವೆಲ್ಲರೂ ಕಟಿ ಬದ್ಧರಾಗಿರಬೇಕು, ಯಾವುದೇ ಕಾರಣಕ್ಕೂ ದುಷ್ಟ ಶಕ್ತಿಗಳಿಗೆ ಅವಕಾಶ ನೀಡಬಾರದು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಆದಿವಾಸಿಗಳಿಗೆ ಕರೆ ನೀಡಿದರು.
ಬಿಟ್ಟಂಗಾಲ ಹೆಗ್ಗಡೆ ಸಮಾಜದಲ್ಲಿ ಬಿಜೆಪಿ ಪಕ್ಷದ ಎಸ್.ಟಿ.ಮೋರ್ಚಾದ ವತಿಯಿಂದ ಆಯೋಜನೆಗೊಂಡಿದ್ದ ಆದಿವಾಸಿಗಳ ಬೃಹತ್ ಸಮಾವೇಶವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಕೆ.ಜಿ.ಬೋಪಯ್ಯ, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಲವಾರು ರೀತಿಯಲ್ಲಿ ಸ್ಪಂದಿಸಿದೆ. ಹಾಡಿ ಜನರ ಅನುಕೂಲಕ್ಕೆ ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಗಿರಿಜನರ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದAತೆ ಸರ್ಕಾರ ಹಲವು ರೀತಿಯ ವಸತಿ ಶಾಲೆಗಳನ್ನು ತೆರೆಯುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಂಡಿದೆ ಎಂದು ವಿವರಿಸಿದರು.
ಆದಿವಾಸಿಗಳ ಪ್ರತಿ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ಗಿರಿಜನರ ಕಲ್ಯಾಣ ಇಲಾಖೆಯ ಮೂಲಕ ಒದಗಿಸುತ್ತಿದೆ. ಮನೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಹಲವಾರು ವಿಧದಲ್ಲಿ ಸರ್ಕಾರ ಗಿರಿಜನ ಅಭಿವೃದ್ಧಿಗೆ ಪಣ ತೊಟ್ಟಿದೆ. ಹಂತ ಹಂತವಾಗಿ ಸರ್ಕಾರದ ಯೋಜನೆಗಳು ಅನುಷ್ಠಾನವಾಗಲಿದೆ ಎಂದರು.
ಹಲವಾರು ಕಡೆಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಇವೆ, ಇವುಗಳನ್ನು ಆದ್ಯತೆ ಮೇರೆ ಕೈಗೆತ್ತಿಕೊಳ್ಳಲಾಗುತ್ತದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೂಲಕ ಗಿರಿಜನರ ಕಲ್ಯಾಣಕ್ಕೆ ವಿಶೇಷ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ.