ಸೋಮವಾರಪೇಟೆ, ಮಾ.೨೦: ತಾಲೂಕಿನ ರೈತರ ಭೂಮಿಗಳಿಗೆ ಸಂಬAಧಿಸಿದAತೆ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹಣ ನೀಡಿದರೆ ಮಾತ್ರ ಕೆಲಸ ಮಾಡಿಕೊಡಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಜಾತ್ಯತೀತ ಜನತಾ ದಳ ಪಕ್ಷದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ವಿವೇಕಾನಂದದ ವೃತ್ತದಿಂದ ಪ್ರಮುಖ ರಸ್ತೆಗಳಲ್ಲಿ ಸರ್ಕಾರ, ಕಂದಾಯ ಇಲಾಖೆಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದ ಮುಖಂಡರು ಹಾಗೂ ಕಾರ್ಯಕರ್ತರು, ಜೇಸೀ ವೇದಿಕೆಯಲ್ಲಿ ಸಭೆ ನಡೆಸಿ, ಶಾಸಕರಾದಿಯಾಗಿ ಕಂದಾಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ, ಇಲ್ಲಿನ ಶಾಸಕರು ಕಳೆದ ೨೫ ವರ್ಷಗಳಿಂದ ಅಧಿಕಾರದಲ್ಲಿದ್ದರೂ ರೈತರ ಭೂಮಿಗೆ ಸಂಬAಧಿಸಿದAತೆ ಇರುವ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರು ತಮ್ಮ ಜಾಗಗಳಿಗೆ ಸಂಬAಧಿಸಿದAತೆ ದಾಖಲಾತಿಗಳ ಸಮಸ್ಯೆಗಳಿಂದಾಗಿ ಸರ್ಕಾರದ ಸವಲತ್ತು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರೊಂದಿಗೆ ಜಮ್ಮಾ ಭೂ ಹಿಡುವಳಿದಾರರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ರೈತರ ಸಮಸ್ಯೆಗಳ ಪರವಾಗಿ ಜೆಡಿಎಸ್ ಪಕ್ಷವು ನಿರಂತರವಾಗಿ ಹೋರಾಟ ನಡೆಸಲಿದೆ ಎಂದರು. ಕ್ಷೇತ್ರದಲ್ಲಿ ೨೫ಸಾವಿರಕ್ಕೂ ಅಧಿಕ ವಸತಿಹೀನ ಕುಟುಂಬಗಳಿದ್ದು, ಇವರುಗಳಿಗೆ ಸೂರು ಕಲ್ಪಿಸಲು ಸರ್ಕಾರ ಮುಂದಾಗಿಲ್ಲ. ಬಡವರು ಹಾಗೂ ರೈತರ ಮೇಲಿನ ಕಾಳಜಿ ಈ ಸರ್ಕಾರಕ್ಕಿಲ್ಲ ಎಂದು ಮುತ್ತಪ್ಪ ದೂಷಿಸಿದರು.

ಪ್ರಮುಖರಾದ ಬಗ್ಗನ ಅನಿಲ್‌ಕುಮಾರ್ ಮಾತನಾಡಿ, ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಕಡತಗಳ ವಿಲೇವಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಪೋಡಿ ದುರಸ್ತಿಯಲ್ಲಿ ವಿಳಂಬ, ಅಕ್ರಮ ಸಕ್ರಮದಲ್ಲಿ ಅರ್ಜಿಗಳ ವಿಲೇವಾರಿಗೆ ಮೀನಾಮೇಷ ಎಣಿಸಲಾಗುತ್ತಿದೆ. ಸರ್ವೆ ಇಲಾಖೆಯಲ್ಲಿನ ಭ್ರಷ್ಟಾಚಾರ ಮುಗಿಲುಮುಟ್ಟಿದೆ ಎಂದು ಆರೋಪಿಸಿದರು.

ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಶಾಸಕರ ಕಚೇರಿ ಹಿಂಭಾಗವೇ ತಾಲೂಕು ಕಚೇರಿ ಇದೆ. ಆದರೆ ಇಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಶಾಸಕರು ಗಮನಿಸುತ್ತಿಲ್ಲ. ಸರ್ವೆ, ಕಂದಾಯ ಇಲಾಖೆಯಲ್ಲಿನ ಲೋಪಗಳನ್ನು ಸರಿಪಡಿಸುತ್ತಿಲ್ಲ. ಇದರಿಂದಾಗಿ ಬಡವರು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಂಡಳ್ಳಿಯಲ್ಲಿ ಬಡ ರೈತರಿಗೆ ಸೇರಿದ ಕಾಫಿ ತೋಟವನ್ನು ಅಧಿಕಾರಿಗಳೇ ಕಡಿದಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವವಿದೆಯೋ ಅಥವಾ ಹಿಟ್ಲರಿಸಂ ಇದೆಯೋ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ತಾಲೂಕು ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ಪ್ರತಿಭಟನೆ ಮುಂದುವರೆಸಿದರು. ಕಚೇರಿಯ ಬಾಗಿಲಿನಲ್ಲಿ ಕುಳಿತು ಧರಣಿ ಮುಂದುವರೆಸಿದರು. ತಹಶಿಲ್ದಾರ್ ನರಗುಂದ್ ಅವರೊಂದಿಗೆ ವಾಗ್ವಾದ ನಡೆಸಿದ ಕಾರ್ಯಕರ್ತರು, ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಂದು ಒತ್ತಾಯಿಸಿದರು.

ಪೋಡಿ ದುರಸ್ತಿ, ೯೪ಸಿ, ೯೪ಸಿಸಿ ಸೇರಿದಂತೆ ಇನ್ನಿತರ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಮಂದಿಯ ಅರ್ಜಿಯನ್ನು ತಕ್ಷಣ ವಿಲೇವಾರಿ ಮಾಡಬೇಕು. ಅಕ್ರಮ ಸಕ್ರಮ ಸಮಿತಿಗೆ ಎಲ್ಲಾ ಅರ್ಜಿಗಳನ್ನು ಮಂಡಿಸಬೇಕು. ತಿರಸ್ಕಾರಗೊಳ್ಳುವ ಅರ್ಜಿಗಳಿಗೆ ಹಿಂಬರಹ ನೀಡಬೇಕು. ರೈತರನ್ನು ವೃಥಾ ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರೈತರ ಅರ್ಜಿಗಳ ವಿಲೇವಾರಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ದೀರ್ಘಕಾಲದಿಂದ ಉಳಿಕೆಯಾಗಿರುವ ಅರ್ಜಿಗಳ ಮಾಹಿತಿ ನೀಡಿದರೆ ಮುಂದಿನ ಕ್ರಮ ವಹಿಸಲಾಗುವುದು ಎಂದು ತಹಶೀಲ್ದಾರ್ ನರಗುಂದ್ ಅವರು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರಾದ ಕೆ.ಟಿ. ಪರಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಎಂ.ಎ. ರುಬೀನಾ, ಪ್ರಮುಖರಾದ ಜಾನಕಿ ವೆಂಕಟೇಶ್, ಜಲಾ ಹೂವಯ್ಯ, ಹರಗ ಶರಣ್ ಗೌಡ, ತ್ರಿಶೂಲ್, ಹೊಸಬೀಡು ಹೂವಯ್ಯ, ಆದರ್ಶ್ ತಮ್ಮಯ್ಯ ಸೇರಿದಂತೆ ನೂರಾರು ಮಂದಿ ಭಾಗಿಯಾಗಿದ್ದರು.