ಗೋಣಿಕೊಪ್ಪಲು, ಮಾ.೨೦: ಕಾಂಗ್ರೆಸ್ ಪಕ್ಷದ ವತಿಯಿಂದ ಪರಿಶಿಷ್ಟ ಪಂಗಡ ಸಮಾವೇಶವು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಿತು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸಂಬAಧಿಸಿದ ವಿವಿಧ ಭಾಗಗಳಿಂದ ಪರಿಶಿಷ್ಟ ಪಂಗಡದ ಸಾವಿರಾರು ಮಂದಿ ಆಗಮಿಸಿದ್ದರು. ಪಟ್ಟಣದ ತಾಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗುವ ಮೂಲಕ ಕೊಡವ ಸಮಾಜದಲ್ಲಿ ಸಮಾಗಮಗೊಂಡರು.

ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ, ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ, ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಸೇರಿದಂತೆ ಇನ್ನಿತರ ಪ್ರಮುಖರು ತೆರೆದ ಜೀಪಿನಲ್ಲಿ ಆಗಮಿಸಿದರು.

ಮೆರವಣಿಗೆಯಲ್ಲಿ ಆದಿವಾಸಿಗಳ ಕಲಾ ತಂಡಗಳು ಗಮನ ಸೆಳೆದವು. ಕೊಡವ ಸಮಾಜ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಆದಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ, ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ, ಜನ ಬದಲಾವಣೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮರೀಚಿಕೆಯಾಗಿದೆ.

ಇಂದಿನ ಸಮಾವೇಶಕ್ಕೆ ಆಗಮಿಸಿರುವ ಆದಿವಾಸಿಗಳೇ ಇದಕ್ಕೆ ಸಾಕ್ಷಿ ಎಂದರು. ಇಲ್ಲಿನತನಕ ಗಿರಿಜನರ ಸಮಸ್ಯೆಗೆ ಪರಿಹಾರ ಒದಗಿಸಿಲ್ಲ. ಬುಡಕಟ್ಟು ಜನಾಂಗದವರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಾಧ್ಯ. ಕೊಡಗಿನಲ್ಲಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಗಬೇಕಾಗಿದೆ. ನಮಗೆ ಯಾವುದೇ ಅಧಿಕಾರವಿಲ್ಲ. ಆದರೆ ನಾವು ನಿಮ್ಮ ಮನೆ ಬಾಗಿಲಿಗೆ ಆಗಮಿಸಿ ಸಮಸ್ಯೆ ಆಲಿಸುತ್ತಿದ್ದೇವೆ.

ಇಲ್ಲಿಂದ ಆರಿಸಿ ಹೋಗಿರುವ ವಿಧಾನಸಭೆ ಹಾಗೂ ಪರಿಷತ್‌ನ ಸದಸ್ಯರು ಸದನದಲ್ಲಿ ಬುಡಕಟ್ಟು ಜನಾಂಗದ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಧ್ವನಿ ಎತ್ತುತ್ತಿಲ್ಲ ಎಂದು ಆರೋಪಿಸಿದರು. ಆದಿವಾಸಿಗಳ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ನೀಡುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಹೆಸರಿಗಷ್ಟೇ ಹಕ್ಕು ಪತ್ರ ನೀಡಿದ್ದಾರೆ. ಆದಿವಾಸಿಗಳಿಗೆ ಇನ್ನೂ ಆರ್.ಟಿ.ಸಿ. ನೀಡಿಲ್ಲ. ಮುಂದೆ ಇಂತಹ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ. ಕಾಂಗ್ರೆಸ್ ಪಕ್ಷಕ್ಕೆ ತಾವುಗಳು ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ರಾಜ್ಯ ವಕ್ತಾರ ಸಂಕೇತ್ ಪೂವಯ್ಯ ಮಾತನಾಡಿ, ಆದಿವಾಸಿಗಳ ಜನಾಂಗ ಕಷ್ಟದಲ್ಲಿ ಸಿಲುಕಿದೆ; ಇವರ ಕಷ್ಟ ಆಲಿಸುವಲ್ಲಿ ಸರ್ಕಾರ ಸತತವಾಗಿ ವಿಫಲವಾಗಿದೆ ಎಂದರು. ಇಂತಹ ಹಲವು ಸಮಸ್ಯೆಗಳಿಗೆ ಮುಕ್ತಿ ಸಿಗಲು ಕ್ಷೇತ್ರಕ್ಕೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಸಮರ್ಥ ಅಭ್ಯರ್ಥಿಯಾಗಿ ಪೊನ್ನಣ್ಣ ಇದ್ದಾರೆ ಎಂದರು.

ಮತದಾನದ ವೇಳೆ ಶೇ.೧೦೦ ಮತದಾನವಾಗುವಂತೆ ತಾವುಗಳು ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಕೊಡಗಿನಲ್ಲಿ ಉತ್ತಮ ಸಂಘಟನೆಯಾಗಿದೆ. ಬಡಜನರಿಗೆ ಕಾಂಗ್ರೆಸ್ ಸದಾ ದುಡಿಯುವ ಪಕ್ಷ ಎಂದರು. ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ಎಸ್.ಎನ್. ರಾಜಾರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪರಿಶಿಷ್ಟರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾಗಿದೆ ಎಂದರು.

ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಮಾಚಯ್ಯ, ಮಾಜಿ ಜಿ.ಪಂ.ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ, ಪಿ.ಆರ್.ಪಂಕಜ, ಪರಿಶಿಷ್ಟ ವರ್ಗದ ತಾಲೂಕು ಅಧ್ಯಕ್ಷ ಮಣಿಕುಂಞ, ಕಾಂಗ್ರೆಸ್ ಹಿರಿಯ ಮುಖಂಡ ಟಿ.ಪಿ. ರಮೇಶ್, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಸೇರಿದಂತೆ ಇನ್ನಿತರ ಗಣ್ಯರು ಮಾತನಾಡಿದರು.

ಚಿತ್ರನಟ ಸಾಧು ಕೋಕಿಲ ಮಾತನಾಡಿ ಕೊಡಗಿನಲ್ಲಿ ಆದಿವಾಸಿಗಳು ನಿರಂತರ ಕಷ್ಟದಲ್ಲಿ ಇದ್ದಾರೆ ಹಾಗಾಗಿ ಬದಲಾವಣೆ ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು.