ಹತ್ತು ಹಲವು ವಿಶೇಷತೆ ಗಳ ಮೂಲಕ ಕೊಡವ ಕೌಟುಂಬಿಕ ಹಾಕಿ ಉತ್ಸವ ೧೯೯೭ ರಿಂದ ೨೦೧೮ ರ ತನಕ ಸತತವಾಗಿ ನಡೆದುಕೊಂಡು ಬಂದಿತ್ತು. ಬೇಸಿಗೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಇದೊಂದು ಸಂಭ್ರಮವೂ ಆಗಿರುತ್ತಿತ್ತಲ್ಲದೆ ದೇಶ-ವಿದೇಶಗಳ ಗಮನವನ್ನೂ ಸೆಳೆಯುತ್ತಿತ್ತು. ಸತತ ೨೨ ವರ್ಷ ಜರುಗಿದ್ದ ಈ ಪಂದ್ಯಾವಳಿ ೨೦೧೮ ರಿಂದ ಅನಿವಾರ್ಯ ಕಾರಣ ಗಳಿಂದಾಗಿ ಸ್ಥಗಿತಗೊಳ್ಳಬೇಕಾಯಿತು.

೨೦೧೮ ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ದಿಂದಾಗಿ ೨೦೧೯ ರಲ್ಲಿ ಮಾನವೀಯ ನೆಲೆಗಟ್ಟಿನಲ್ಲಿ ಉತ್ಸವವನ್ನು ಕೈಬಿಡಲಾಗಿತ್ತು. ೨೦೧೯ ರಲ್ಲೂ ಮಳೆಗಾಲದಲ್ಲಿ ಮತ್ತೆ ಪ್ರಾಕೃತಿಕ ದುರಂತ ಮರುಕಳಿಸಿತ್ತು.

ಇದರ ಜೊತೆಯಲ್ಲಿ ಇಡೀ ವಿಶ್ವವೇ ಆಘಾತಕ್ಕೆ ಒಳಗಾಗುವಂತಾಗಿ ಪರಿಣಮಿಸಿದ ಕೊರೊನಾ ಹೆಮ್ಮಾರಿಯ ಕಾರಣ ಎದುರಾಗಿತ್ತು. ಬೇಸಿಗೆ ಅವಧಿಯಲ್ಲಿ ಲಾಕ್‌ಡೌನ್, ಕರ್ಫ್ಯೂ ಸೇರಿದಂತೆ ರಾಜ್ಯ-ದೇಶವ್ಯಾಪಿಯಾಗಿ ನಿಬಂಧನೆಗಳನ್ನು ವಿಧಿಸಲಾಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ ನಾಲ್ಕು ವರ್ಷಗಳಿಂದ ನೇಪಥ್ಯಕ್ಕೆ ಸರಿದಿದ್ದ ಈ ಹಾಕಿ ಉತ್ಸವ ೨೦೨೩ ರಲ್ಲಿ ಮರು ಚಾಲನೆಗೊಳ್ಳುತ್ತಿದೆ.

೨೩ನೇ ವರ್ಷದ ಉತ್ಸವವನ್ನು ಅಪ್ಪಚೆಟ್ಟೋಳಂಡ ಕುಟುಂಬಸ್ಥರು ನಾಪೋಕ್ಲುವಿನಲ್ಲಿ ಆಯೋಜಿ ಸುತ್ತಿದ್ದಾರೆ. ನಾಲ್ಕು ವರ್ಷಗಳ ಅಂತರವನ್ನು ಮರೆಯುವಂತೆ ಮಾಡುವ ಮೂಲಕ ಹಿಂದಿನ ವೈಭವ ಮರುಕಳಿಸುವ ನಿರೀಕ್ಷೆಯಲ್ಲಿ ಹಾಕಿ ಅಭಿಮಾನಿಗಳಿದ್ದಾರೆ.