ಶನಿವಾರಸಂತೆ, ಮಾ. ೧೬: ಸಮೀಪದ ಕೊಡ್ಲಿಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಲೆಜೆಂಡ್ಸ್ ಕಪ್ ಕ್ರಿಕೆಟ್ ಪ್ರಿಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಕಬಿನಿ ತಂಡಕ್ಕೆ ಪ್ರಥಮ ಸ್ಥಾನ ಲಭಿಸಿತು.
೨ ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ರಾಜ್ಯದ ಪ್ರಮುಖ ನದಿಗಳ ಹೆಸರಿನ ೩೫ ವರ್ಷ ಮೇಲ್ಪಟ್ಟ ಕ್ರೀಡಾಪಟುಗಳ ೬ ತಂಡಗಳು ಭಾಗವಹಿಸಿದ್ದವು. ತುಂಗಭದ್ರ ತಂಡ ದ್ವಿತೀಯ ಸ್ಥಾನ ಹಾಗೂ ಹೇಮಾವತಿ ತಂಡ ೩ನೇ ಸ್ಥಾನ ಪಡೆದುಕೊಂಡವು.
ಪ್ರಥಮ ಸ್ಥಾನ ವಿಜೇತ ತಂಡಕ್ಕೆ ರೂ. ೨೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ರೂ. ೧೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ. ೪ ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು. ಎರಡೂ ತಂಡಗಳ ಎಲ್ಲಾ ಕ್ರೀಡಾಪಟುಗಳಿಗೆ ವೈಯಕ್ತಿಕ ಬಹುಮಾನ ವಿತರಿಸಲಾಯಿತು. ಪರಾಜಿತ ೩ ತಂಡಗಳ ಆಟಗಾರರಿಗೂ ಟ್ರೋಫಿ ನೀಡಿ ಗೌರವಿಸಲಾಯಿತು.
ಪಂದ್ಯಾವಳಿಯಲ್ಲಿ ತಂಗಭದ್ರ ತಂಡದ ಮಂಜುನಾಥ್ ಉತ್ತಮ ಆಟಗಾರ ಪ್ರಶಸ್ತಿ, ಕಬಿನಿ ತಂಡದ ದುಶ್ಯಂತ್ ಉತ್ತಮ ಬ್ಯಾಟ್ಸ್ ಮನ್ ಪ್ರಶಸ್ತಿ, ಹೇಮಾವತಿ ತಂಡದ ರಫೀಕ್ ಉತ್ತಮ ಬೌಲರ್ ಹಾಗೂ ನೇತ್ರಾವತಿ ತಂಡದ ಚಿಂಟು ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಕೆಂಚಮ್ಮನ ಹೊಸಕೋಟೆ ಹೋಬಳಿಯ ಮಾದಿಹಳ್ಳಿ ಗ್ರಾಮದ ನಿವೃತ್ತ ಯೋಧ ರಾಷ್ಟç ಪ್ರಶಸ್ತಿ ವಿಜೇತ ಕೆ.ಆರ್. ರಂಗಸ್ವಾಮಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್, ನಿವೃತ್ತ ಸೈನಿಕ ದೇವರಾಜ್, ಮುಖಂಡರಾದ ಔರಂಗಜೇಬ್, ಹೆಚ್.ಎಂ. ದಿವಾಕರ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್, ಚಿದಾನಂದ್, ಡಿ.ಎಸ್. ಮಹೇಶ್, ಭಾನುಪ್ರಕಾಶ್ ಇತರರು ಉಪಸ್ಥಿತರಿದ್ದರು.