ಮಡಿಕೇರಿ, ಮಾ. ೧೬: ವಿಜಯ ಸಂಕಲ್ಪ ಯಾತ್ರೆಯ ಪ್ರಚಾರದ ಹಿನ್ನೆಲೆ ಬಿಜೆಪಿಯಿಂದ ಗೋಣಿಕೊಪ್ಪಲಿನ ವಿವಿಧೆಡೆ ಬ್ಯಾನರ್ಗಳನ್ನು ಅಳವಡಿಸುವ ಸಂದರ್ಭ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರದ ಭಿತ್ತಿ ಪತ್ರವನ್ನು ಡಾ. ಅಂಬೇಡ್ಕರ್ ಅವರ ಭಾವಚಿತ್ರದ ಮೇಲೆ ಅಂಟಿಸಿ ಅವಮಾನ ಮಾಡಲಾಗಿದ್ದು, ಈ ಬಗ್ಗೆ ಬಿಜೆಪಿ ಪ್ರಮುಖರು ಬಹಿರಂಗ ಕ್ಷಮೆ ಯಾಚಿಸಬೇಕೆಂದು ಕೊಡಗು ಜಿಲ್ಲಾ ದಲಿತ ಸಂಘಷÀð ಸಮಿತಿ ಆಗ್ರಹಿಸಿದೆ.
ಸುದ್ದಿ ಗೋಷ್ಠಿಯಲ್ಲಿ ದಸಂಸ ಮಡಿಕೇರಿ ತಾಲೂಕು ಸಂಚಾಲಕ ದೀಪಕ್ ಮಾತನಾಡಿ, ಅಂಬೇಡ್ಕರ್ ಅವರ ಭಾವ ಚಿತ್ರದ ಮೇಲೆ ಬೊಮ್ಮಾಯಿ ಅವರ ಭಿತ್ತಿ ಪತ್ರವನ್ನು ಅನುಚಿತವಾಗಿ ಉದ್ದೇಶಪೂರ್ವಕವಾಗಿಯೇ ಅಳವಡಿಸಿರುವುದಾಗಿ ಆರೋಪಿಸಿದರು. ಈ ಬಗ್ಗೆ ಮುಂದಿನ ಶುಕ್ರವಾರದಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ಘಟನೆಗೆ ಸಂಬAಧಿಸಿದAತೆ ಜಿಲ್ಲಾ ಬಿಜೆಪಿ ಅಧ್ಯಕ್ಷರು, ಇಲ್ಲವೆ ಜಿಲ್ಲೆಯ ಜನಪ್ರತಿನಿಧಿಗಳು ಬಹಿರಂಗ ಕ್ಷಮೆ ಯಾಚನೆ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ದಲಿತ ಸಂಘÀರ್ಷ ಸಮಿತಿ ಪ್ರಚಾರ ನಡೆಸಲಿದೆ ಎಂದರು.
ಕರ್ನಾಟಕ ದಸಂಸ ವಿಭಾಗೀಯ ಸಂಚಾಲಕ ಎನ್. ವೀರಭದ್ರಯ್ಯ ಮಾತನಾಡಿ, ಮುಖ್ಯ ಮಂತ್ರಿಗಳು ಜಿಲ್ಲೆಗೆ ಆಗಮಿಸುವ ಕಾರ್ಯಕ್ರಮದಲ್ಲಿ ವೀರಾಜಪೇಟೆ ಅಂಬೇಡ್ಕರ್ ಭವನದ ಉದ್ಘಾಟನೆಯನ್ನು ಸೇರಿಸಲಾಗಿದೆ. ಆದರೆ, ಆ ಭವನದ ಕೆಲಸ ಕಾರ್ಯಗಳೆ ಪೂರ್ಣವಾಗಿಲ್ಲ ಎಂದು ತಿಳಿಸಿದರಲ್ಲದೆ, ತರಾತುರಿಯಲ್ಲಿ ಕಟ್ಟಡ ಉದ್ಘಾಟನೆ ನಡೆಸುತ್ತಿರುವ ಕ್ರಮ ಖಂಡನೀಯ ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಮಾತನಾಡಿ, ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ದಲಿತ ಸಮೂಹಕ್ಕೆ ಪ್ರಾಧಾನ್ಯತೆಯನ್ನು ನೀಡುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಗೆಲುವಿಗೆ ದಲಿತ ಸಮೂಹವೇ ನಿರ್ಣಾಯಕವೆಂದು ಅಭಿಪ್ರಾಯಿಸಿದರು.
ಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಕೆ. ಗಣೇಶ್, ನಗರ ಸಂಚಾಲಕ ಸಿ.ಪಿ. ಸಿದ್ದೇಶ್, ಚೇರಂಬಾಣೆ ಗ್ರಾಮ ಸಮಿತಿ ಅಧ್ಯಕ್ಷ ಮನೋಜ್ ಕುಮಾರ್ ಉಪಸ್ಥಿತರಿದ್ದರು.