ಮಡಿಕೇರಿ, ಮಾ. ೧೫: ಇತಿಹಾಸ ಪ್ರಸಿದ್ಧ ಬೊಟ್ಟಿಯತ್‌ನಾಡ್ ಈಶ್ವರ ದೇವರ ವಾರ್ಷಿಕೋತ್ಸವದ ಅಂಗವಾಗಿ ನೆರ್ಪು ಪ್ರಯುಕ್ತ ಎತ್ತ್ ಪೋರ್ ಮತ್ತು ವಿವಿಧ ಪೂಜಾ ಕಾರ್ಯಕ್ರಮ ವಿಜೃಂಭಣೆಯಿAದ ನಡೆಯಿತು. ತಾ. ೧೬ ರಂದು (ಇಂದು) ದೇವರ ಅವಭೃತ ಸ್ನಾನ ಸಂಜೆ ೪ ಗಂಟೆಗೆ ನಡೆಯಲಿದೆ.

ಪೊನ್ನಂಪೇಟೆ ತಾಲೂಕು ಕುಂದಾ ಮುಗುಟಗೇರಿ ಗ್ರಾಮದಲ್ಲಿರುವ ಆರು ಗ್ರಾಮಗಳಿಗೆ ಸೇರಿದ ನಾಡ್ ದೇವಸ್ಥಾನ ಅಥವಾ ಈಶ್ವರ ದೇವಸ್ಥಾನಕ್ಕೆ ಶತಮಾನಗಳ ಇತಿಹಾಸವಿದ್ದು, ಇದರ ವಾರ್ಷಿಕ ಉತ್ಸವ ತಾ. ೮ ರಂದು ಸಂಜೆ ಕೊಡಿಮರ ನಿಲ್ಲಿಸುವುದರ ಮೂಲಕ ಆರಂಭಗೊAಡಿದೆ.

ಕುಂದಾ, ಮುಗುಟಗೇರಿ, ಈಚೂರು, ಹುದೂರು, ಹಳ್ಳಿಗಟ್ಟು, ಅರ್ವತೋಕ್ಲು ಈ ಆರು ಗ್ರಾಮಗಳಿಗೆ ಸೇರಿರುವ ನಾಡ್ ದೇವಸ್ಥಾನದಲ್ಲಿ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಉತ್ಸವ ಮೂರ್ತಿ ಹೊರಗೆ ಬರುವ ಮೂಲಕ ವಿಶೇಷ ಪೂಜೆ ಸೇರಿದಂತೆ ಮಧ್ಯಾಹ್ನ ಮತ್ತು ಸಂಜೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವಿಶೇಷ ಪೂಜೆಯ ಜೊತೆಗೆ ಹರಕೆ ಬೊಳಕ್ ಪೂಜೆ ಏರ್ಪಡಿಸಲಾಗಿತ್ತು. ಬುಧವಾರ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ನಡೆದವು. ಸಂಜೆ ಆರು ಗ್ರಾಮಗಳ ತಕ್ಕಮುಖ್ಯಸ್ಥರು ಸೇರಿ ಎತ್ತ್ ಪೊರ್ ದೇವಸ್ಥಾನಕ್ಕೆ ಬರುವ ಮೂಲಕ ಸಂಜೆಯ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಉತ್ಸವ ಮೂರ್ತಿ (ತಡಂಬು) ಹೊರ ಬಂದು ಸಾಂಪ್ರದಾಯಿಕ ಓಲಗ ಹಾಗೂ ಚಂಡೆಯ ನಾದಕ್ಕೆ ಹೆಜ್ಜೆ ಹಾಕಿತು.

ಈ ಸಂದರ್ಭ ಆರು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡಿದ್ದರು. ತಾ. ೧೬ ರಂದು ಸಂಜೆ ದೇವರ ಅವಭೃತ ಸ್ನಾನ ನಡೆಯಲಿದೆ. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.