*ಗೋಣಿಕೊಪ್ಪ, ಮಾ. ೧೫: ೮೪ ಕೋಟಿ ಅನುದಾನದಲ್ಲಿ ಜಲ್ ಜೀವನ್ ಕುಡಿಯುವ ನೀರು ಯೋಜನೆ ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ತನ್ನ ಗುರಿಯನ್ನು ತಲುಪಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದ್ದಾರೆ.
ಸೋಮವಾರ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣಂಗೇರಿ ಕಾಲೋನಿಯಲ್ಲಿ ರೂ. ೨೭ ಲಕ್ಷ ಅನುದಾನದಲ್ಲಿ ಜಲ್ ಜೀವನ್ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರೂ. ೧೦ ಲಕ್ಷ ವೆಚ್ಚದಲ್ಲಿ ೨೫ ಸಾವಿರ ಲೀಟರ್ ಕುಡಿಯುವ ನೀರು ಮತ್ತು ರೂ. ೧೭ ಲಕ್ಷದಲ್ಲಿ ೫೦ ಮನೆಗಳಿಗೆ ಕುಡಿಯವ ನೀರು ಸಂಪರ್ಕ ಒದಗಿಸಲಾಗುವುದು ಎಂದು ಮಾಹಿತಿ ನೀಡಿದ ಶಾಸಕರು, ಕೇಂದ್ರ ಸರ್ಕಾರ ಜಲ್ ಜೀವನ್ ಯೋಜನೆ ಅನುಷ್ಠಾನಕ್ಕೆ ೨೦೨೪ ಕ್ಕೆ ನಿಗದಿತ ಗುರಿಯಾಗಿ ನೀಡಿತು. ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ಸಂಪೂರ್ಣ ಗುರಿಯನ್ನು ಸಾಧಿಸಿದೆ.
ರೂ. ೮೪ ಕೋಟಿ ಅನುದಾನದಲ್ಲಿ ೬೮ ಕೋಟಿ ಟೆಂಡರ್ ಬಳಕೆಯೊಂದಿಗೆ ರೂ. ೨೬ ಸಾವಿರ ಮನೆಗಳಿಗೆ ಕುಡಿಯವ ನೀರು ಸಂಪರ್ಕ ಒದಗಿಸಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೊಳವೆ ಬಾವಿಗಳಿಂದ ಅಂತರ್ಜಲ ಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೊಂಗಣ ಹೊಳೆಯಿಂದ ದಕ್ಷಿಣ ಕೊಡಗಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಅನುಷ್ಠಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಈ ಯೋಜನೆ ಅನುಷ್ಠಾನ ಗೊಂಡರೆ ಸುಮಾರು ೨೦ ಪಂಚಾಯಿಗಳ ವ್ಯಾಪ್ತಿಯ ಜನರಿಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಲು ಸಾಧ್ಯವಾಗಬಲ್ಲದು ಎಂದರು. ಕಾಲೋನಿ ಜನರ ಬೇಡಿಕೆಯಂತೆ ಆಶ್ರಯ ಯೋಜನೆ ಗಳಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಅತಿವೃಷ್ಟಿ ಕೊರೊನಾದಿಂದಾಗಿ ಸತತ ಮೂರು ವರ್ಷಗಳು ಸಾಕಷ್ಟು ಕೆಲಸಗಳನ್ನು ಮಾಡಲು ಸರಕಾರಕ್ಕೆ ಸಾಧ್ಯವಾಗಲಿಲ್ಲ. ಆದರೂ, ಜನರ ನಿರೀಕ್ಷೆ ಮತ್ತು ಬೇಡಿಕೆಗೆ ಅನುಗುಣವಾಗಿ ಜನಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ ಕಾಣದಿದ್ದರೂ ಶೇಕಡ ೯೦ರಷ್ಟು ಅಭಿವೃದ್ಧಿ ಕಂಡಿದೆ. ಈ ಬಾರಿ ಸರಕಾರ ವಿಶೇಷ ಅನುದಾನವಾಗಿ ರಸ್ತೆ ಅಭಿವೃದ್ಧಿಗೆ ೧೦೦ ಕೋಟಿ ನೀಡಿದೆ.
ಟ್ಯಾಂಕ್ ನಿರ್ಮಿಸಲು ಸ್ಥಳ ಒದಗಿಸಿಕೊಟ್ಟ ದೊರೆಪ್ಪ, ಚಾಮರಾಜ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್, ಹುದಿಕೇರಿ ಗ್ರಾಪಂ ಅಧ್ಯಕ್ಷ ವಾಸು ಬಿದ್ದಪ್ಪ, ಸದಸ್ಯರುಗಳಾದ ಬೊಜ್ಜಂಗಡ ಸುನಿಲ್, ಚಂದ್ರಪ್ರಕಾಶ್ ಶಿಲ್ಪ, ಜಲ್ ಜೀವನ್ ಯೋಜನೆ ಅಧಿಕಾರಿ ಯೋಗೇಶ್ ಗೌಡ, ಶಕ್ತಿ ಕೇಂದ್ರದ ಪ್ರಮುಖ ಅಯ್ಯಣ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿನೋದ್ ಕುಮಾರ್, ಕಾಲೋನಿ ನಿವಾಸಿಗಳು ಇದ್ದರು.