ಮಡಿಕೇರಿ, ಮಾ. ೧೫: ಅಡುಗೆ ಅನಿಲ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಐಜಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಡಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಹಿಳಾ ಕಾಂಗ್ರೆಸ್ನ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ಬಡವರ, ಮಹಿಳೆಯರ ಪರ ಕೆಲಸ ಮಾಡಲು ಬಿಜೆಪಿ ಸರ್ಕಾರಕ್ಕೆ ಆಸಕ್ತಿಯಿಲ್ಲ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡುವ ಮನಸಿಲ್ಲ. ಸರ್ಕಾರಕ್ಕೆ ಮಹಿಳೆಯರ ಮೇಲೆ, ಬಡವರ ಮೇಲೆ ಮಾನವೀಯತೆ, ಕಾಳಜಿ ಇದ್ದರೆ ತಕ್ಷಣವೇ ಗ್ಯಾಸ್ ಬೆಲೆಯನ್ನು ಇಳಿಸಬೇಕು, ಟ್ಯಾಕ್ಸ್ ಕಡಿಮೆ ಮಾಡಿ ಬಡವರ ಪರವಾದ ಆಡಳಿತ ನೀಡಬೇಕು ಎಂದು ಒತ್ತಾಯಿಸಿದರು.
ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಜಿಲ್ಲೆ ಹಾಗೂ ರಾಜ್ಯದ ಜನ ತಕ್ಕ ಪಾಠ ಕಲಿಸಲಿದ್ದು, ಕಾಂಗ್ರೆಸ್ ಅಧಿಕಾರಕ್ಕೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ, ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮಹಿಳಾ ಕಾಂಗ್ರೆಸ್ ಬೆಂಬಲ ನೀಡಲಿದೆ. ಬಿಜೆಪಿ ನೇತೃತ್ವದ ಸರ್ಕಾರದಿಂದ ಅಗತ್ಯ ವಸ್ತುಗಳ ಬೆಲೆಯನ್ನು ಎರಡು ಪಟ್ಟು ಏರಿಕೆ ಮಾಡಲಾಗಿದ್ದು, ಬಡವರ ಪರವಾದ, ಮಹಿಳೆಯ ಪರವಾದ ಯಾವುದೇ ಕಾಳಜಿ ಹೊಂದಿಲ್ಲ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಸಂದರ್ಭದಲ್ಲಿ ಡಬಲ್ ಇಂಜಿನ್ ಸರ್ಕಾರ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಮಾಧ್ಯಮ ಸಂವಹನ ವಕ್ತಾರ ಟಿ.ಪಿ. ರಮೇಶ್, ಕೆಪಿಸಿಸಿ ಸದಸ್ಯ ರಮಾನಾಥ್, ಅಬ್ದುಲ್ಗಫೂರ್, ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ವಿ.ಪಿ. ಶಶಿಧರ್, ಇಸ್ಮಾಯಿಲ್, ಹಂಝ, ಭಾರತಿ, ಪೊನ್ನಕ್ಕಿ, ಮೀನಾಕ್ಷಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಡಿಸಿಸಿ ಸದಸ್ಯರಾದ ಸುಮಿತಾ ಮಾದಪ್ಪ, ಫಿಲೋಮಿನಾ, ನೆರವಂಡ ಉಮೇಶ್, ಸೇವಾದಳ ಅಧ್ಯಕ್ಷ ಮೊಣ್ಣಪ್ಪ, ನಗರಾಧ್ಯಕ್ಷ ರಾಜೇಶ್ ಯಲ್ಲಪ್ಪ, ವಕ್ತಾರ ತೆನ್ನೀರ ಮೈನಾ, ಜಿ.ಪಂ. ಮಾಜಿ ಸದಸ್ಯ ಲತೀಫ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.