ಇತ್ತೀಚಿನ ವರ್ಷಗಳಲ್ಲಿ ಸರಕಾರ ವಿವಿಧ ಇಲಾಖಾ ಸಮುಚ್ಚಯಗಳನ್ನು, ಸಂಕೀರ್ಣಗಳು, ಇಲಾಖೆಗಳು ಮತ್ತು ಕಚೇರಿಗಳನ್ನು ನಿರ್ಮಿಸುತ್ತಿವೆ ಹಾಗೂ ಇತರ ಕಚೇರಿಗಳು ಖಾಸಗಿ ಕಟ್ಟಡಗಳನ್ನು ಬಾಡಿಗೆಗೆ ಗುರುತಿಸಿ ಎಲ್ಲೆಂದರಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ, ಇವುಗಳು ಎಲ್ಲಿವೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಇವುಗಳ ಬಗ್ಗೆ ಸಾರ್ವಜನಿಕರ ತಿಳುವಳಿಕೆಗಾಗಿ ಯಾವ ರಸ್ತೆ, ಎಲ್ಲಿವೆ ಎಂಬ ನಾಮಫಲಕಗಳನ್ನು ಅಳವಡಿಸದಿರುವುದು ದುರದೃಷ್ಟಕರ!
ರಾಜ್ಯ ಮತ್ತು ಕೇಂದ್ರ ಸರಕಾರ ಆಯಾ ಇಲಾಖೆಗಳ ಮೂಲಕ ಎಲ್ಲೆಂದರಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿವೆ. ಇಂತಹ ಸಂಕೀರ್ಣಗಳು, ಕಚೇರಿಗಳು, ಇಲಾಖೆಗಳು ಎಲ್ಲಿವೆ ಎಂದು ಪ್ರತಿಯೊಬ್ಬ ಸಾರ್ವಜನಿಕರು ಪ್ರಶ್ನಿಸುತ್ತ ಸಿಕ್ಕಸಿಕ್ಕವರಲ್ಲಿ ಕೇಳು ವಂತಾಗಿದೆ. ಕೊಡಗಿನ ಬಹುತೇಕ ಮಂದಿಗೆ ಜಿಲ್ಲಾ ಪಂಚಾಯಿತಿ ಸಂಕೀರ್ಣ ಸೇರಿದಂತೆ ಜಿಲ್ಲಾ ನ್ಯಾಯಾಲಯ ಸಂಕೀರ್ಣ, ಕೇಂದ್ರೀಯ ವಿದ್ಯಾಲಯ ಮತ್ತು ಕೊಡವ ಹೆರಿಟೇಜ್ ಮತ್ತಿತರ ಕಾರ್ಯಾಲಯಗಳು ಎಲ್ಲಿವೆಂದು ಇನ್ನೂ ಯಾರಿಗೂ ತಿಳಿದಿಲ್ಲ.
ಅಲ್ಲದೆ, ಕೆಲವು ಇಲಾಖೆಗಳು ಮತ್ತು ಕಚೇರಿಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಕಚೇರಿಗಳು ಎಲ್ಲಿ, ಯಾವ ರಸ್ತೆಗಳಲ್ಲಿ, ಯಾವ ಪ್ರದೇಶಗಳಲ್ಲಿ ಇವೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಸೂಚನಾ ನಾಮಫಲಕವನ್ನು ಅಳವಡಿಸದಿರುವುದು ದುರದೃಷ್ಟಕರ ಎನ್ನಬಹುದು. ಕಟ್ಟಡಗಳ ಮೇಲೆ ಇಲಾಖೆಗಳ ಹೆಸರುಗಳನ್ನು ಬರೆಯುತ್ತಾರೆ ಹೊರತು, ಆ ಇಲಾಖೆ ಅಥವಾ ಕಚೇರಿಗಳು ಎಲ್ಲಿವೆ ಎಂಬ ಸೂಚನಾ ನಾಮಫಲಕವನ್ನು ಮಾತ್ರ ಅಳವಡಿಸುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ.
ಜಿ.ಪಂ. ನಾಮಫಲಕ ನಾಪತ್ತೆ ?
ಮಡಿಕೇರಿ ನಗರದ ಹೊರವಲಯದಲ್ಲಿರುವ ವಿದ್ಯಾನಗರದ ಒತ್ತಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನ ವೆಚ್ಚ ಮಾಡಿ ವ್ಯವಸ್ಥಿತ ಕೊಡಗು ಜಿಲ್ಲಾ ಪಂಚಾಯಿತಿ ಸಂಕೀರ್ಣವನ್ನು ನಿರ್ಮಿಸಿದೆ. ಈಗಾಗಲೇ ಇಲ್ಲಿ ಆಡಳಿತ ಚಟುವಟಿಕೆಗಳನ್ನು ಆರಂಭಿಸಿ ವರ್ಷಗಳು ಕಳೆದಿವೆ. ಈ ಸಂಕೀರ್ಣ ಎಲ್ಲಿದೆ ಎಂದು ಸೂಚಿಸುವ ನಾಮಫಲಕವೊಂದನ್ನು ಖಾಸಗಿ ನೂತನ ನಿಲ್ದಾಣದ ಎದುರು ಇಂದಿರಾ ಕ್ಯಾಂಟೀನ್ ಮುಂಭಾಗದಲ್ಲಿ ಅಳವಡಿಸಲಾಗಿತ್ತು. ಆದರೆ, ಅಳವಡಿಸಿದ ಕೆಲವೇ ದಿನಗಳಲ್ಲಿ ಈ ನಾಮಫಲಕವನ್ನು ಯಾರೋ ಕಳ್ಳರು ಅಪಹರಿಸಿದ್ದಾರೆ.
ಈ ನಾಮಫಲಕ ಗುಜರಿ ಪಾಲಾಗುವುದನ್ನು “ಬ್ಲಡ್ ಬಯ್ಯ’’ ಎಂದೇ ಹೆಸರುಗಳಿಸಿರುವ ಹಿದಾಯತುಲ್ಲಾ ಅವರು ಪತ್ತೆಹಚ್ಚಿ ನಾಮಫಲಕವನ್ನು ಇದೀಗ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ತೆಗೆದಿಟ್ಟಿದ್ದಾರೆ.
ನಾಮಫಲಕ ನಾಪತ್ತೆಯಾಗಿ ಇಷ್ಟು ದಿನಗಳಾದರೂ ಜಿಲ್ಲಾ ಪಂಚಾಯಿತಿ ನಾಮಫಲಕವನ್ನು ಪತ್ತೆ ಹಚ್ಚುವ, ಪೊಲೀಸ್ ದೂರು ನೀಡುವ ಅಥವಾ ಯಾವುದೇ ಕ್ರಮವಹಿಸದಿರುವ ಬಗ್ಗೆ ನಾಗರಿಕರು ಪ್ರಶ್ನಿಸಿದ್ದಾರೆ. ಈ ನಾಮಫಲಕವನ್ನು ಅಳವಡಿಸುವಾಗ ಸಿಮೆಂಟ್ ಹಾಕಿ ಭದ್ರವಾಗಿ ಅಳವಡಿಸಿದ್ದರೆ ಈ ನಾಮಫಲಕವನ್ನು ಯಾರೂ ಅಪಹರಿಸುತ್ತಿರಲಿಲ್ಲ.
ಇನ್ನು ಮುಂದಾದರೂ ಸಂಬAಧಪಟ್ಟ ಇಲಾಖೆಗಳು ತಮ್ಮ ಕಚೇರಿಗಳು ಎಲ್ಲಿ, ಯಾವ ರಸ್ತೆ ಅಥವಾ ಪ್ರದೇಶಗಳಲ್ಲಿವೆ ಎಂಬುದನ್ನು ಸೂಚಿಸುವ ನಾಮಫಲಕಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
- ಶ್ರೀಧರ್ ಹೂವಲ್ಲಿ.