ಮಡಿಕೇರಿ, ಮಾ. ೧೫: ಜಿಲ್ಲಾಡಳಿತವು ಇತ್ತೀಚೆಗಷ್ಟೆ ‘ಇ-ಪ್ರಸಾದ’ ವ್ಯವಸ್ಥೆಯ ಮೂಲಕ ಪವಿತ್ರ ತಲಕಾವೇರಿಯ ತೀರ್ಥವನ್ನು ಮಾರಾಟ ಮಾಡುವ ಯೋಜನೆಗೆ ಚಾಲನೆ ನೀಡಿದ್ದು, ಇದು ಮೇಲ್ನೋಟಕ್ಕೆ ದೇಶಾದ್ಯಂತ ಹರಡಿರುವ ಕಾವೇರಿ ಭಕ್ತರಿಗೆ ಅನುಕೂಲಕರವಾಗಿ ಕಂಡರೂ ಕಾವೇರಿ ಕ್ಷೇತ್ರದ ಮಹಿಮೆ, ಸ್ಥಳ ಪುರಾಣ, ಪ್ರಾಚೀನ ಧಾರ್ಮಿಕ ಪರಂಪರೆ, ಪೌರಾಣಿಕ ನಂಬಿಕೆಗಳನುಸಾರ ಒಂದು ಅಧಾರ್ಮಿಕ ಹೆಜ್ಜೆಯಾಗಿದೆ. ಈ ಯೋಜನೆಯನ್ನು ಆದಷ್ಟು ಬೇಗ ಕೈಬಿಡದಿದ್ದಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಲಾಗುವುದು ಎಂದು ತಲಕಾವೇರಿ ಮೂಲಸ್ವರೂಪ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಇಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಉಳ್ಳಿಯಡ ಎಂ. ಪೂವಯ್ಯ ಅವರು, ಕಾವೇರಿಯು ರೂಪ ರಹಿತವಾಗಿದ್ದು, ನದಿಯ ನೀರನ್ನೇ ಜನರು ಪ್ರಾರ್ಥಿಸುತ್ತಾರೆ. ಇಂತಹ ಪವಿತ್ರ ನೀರನ್ನು ಮಾರುವ ಮೂಲಕ ಕಾವೇರಿ ತಾಯಿಯನ್ನೇ ಮಾರಾಟ ಮಾಡುತ್ತಿರುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತೀರ್ಥದೊಂದಿಗೆ ಕಾವೇರಿ ಮಾತೆ ಹೆಸರಿನಲ್ಲಿ ಪಂಚಕಜ್ಜಾಯವನ್ನೂ ಮಾರಾಟ ಮಾಡಲಾಗುತ್ತಿದೆ. ಸಂಪ್ರದಾಯ ಪ್ರಕಾರ ಕಾವೇರಿಯಲ್ಲಿ ತೀರ್ಥವೊಂದೇ ಪ್ರಸಾದ. ಪಂಚಕಜ್ಜಾಯ ಇತ್ಯಾದಿಗಳೆಲ್ಲವೂ ಇತರೆಡೆಗಳ ಸಂಪ್ರದಾಯವಾಗಿದ್ದು, ಇದನ್ನು ಪ್ರಸಾದವಾಗಿ ಮಾರಾಟ ಮಾಡುವುದೇ ಆದಲ್ಲಿ ಕಾವೇರಿ ಪ್ರಸಾದ ಎಂದು ಮಾರಾಟ ಮಾಡುವ ಬದಲು ಜಿಲ್ಲಾಡಳಿತ ಬೇರೆ ಹೆಸರಿನಲ್ಲಿ ಮಾರಾಟ ಮಾಡಲಿ. ಆದರೆ ತೀರ್ಥವನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.
(ಮೊದಲ ಪುಟದಿಂದ) ವೇದಿಕೆಯ ಸದಸ್ಯ ವಕೀಲ ಕಿರಿಯಮಾಡ ರತನ್ ತಮ್ಮಯ್ಯ ಅವರು ಮಾತನಾಡಿ, ಹಿಂದಿನ ಕಾಲದಿಂದಲೂ ಬೆಂಗಳೂರು, ತಮಿಳುನಾಡು ಸೇರಿದಂತೆ ವಿವಿಧೆಡೆಗಳಿಂದ ತಲಕಾವೇರಿಗೆ ಆಗಮಿಸಿ ಭಕ್ತರು ಭಕ್ತಿಪೂರ್ವಕವಾಗಿ ತೀರ್ಥಸ್ನಾನ ಮಾಡುತ್ತಿದ್ದಾರೆ. ಇದೀಗ ಇ-ಪ್ರಸಾದ ವ್ವವಸ್ಥೆಯ ಮೂಲಕ ತೀರ್ಥದ ಪಾವಿತ್ರö್ಯತೆ ಕುಗ್ಗುವುದಲ್ಲದೆ ಭಕ್ತರ ಆಗಮನ ಸಂಖ್ಯೆಯೂ ಕಡಿಮೆಯಾಗುತ್ತದೆ. ತೀರ್ಥ ಕುಂಡಿಕೆಯೂ ಕೂಡ ಬತ್ತಿ ಹೋಗುವ ಆತಂಕ ಎದುರಾಗುತ್ತದೆ. ಕೊಡಗಿನಲ್ಲಿ ನೆಲೆಸಿರುವ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಅಭಿಪ್ರಾಯವಿಲ್ಲದೆ, ಯಾವುದೇ ಸಭೆಯನ್ನು ನಡೆಸದೆ ಜಿಲ್ಲಾಡಳಿತ ಈ ಹೆಜ್ಜೆ ಇಟ್ಟಿದ್ದು ಸರಿಯಲ್ಲ. ಇದಲ್ಲದೆ ಮಡಿಕೇರಿ ಅಂಚೆ ಕಚೇರಿಯಲ್ಲಿಯೂ ‘ಕಾವೇರಿ ಪ್ರಸಾದ ಮಾರಾಟಕ್ಕಿದೆ’ ಎಂಬ ಫಲಕವನ್ನು ಅಳವಡಿಸಲಾಗಿದ್ದು, ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ತಿರಿಬೊಳ್ಚ ಸಂಘದ ಅಧ್ಯಕ್ಷೆ ಹಾಗೂ ವೇದಿಕೆಯ ಮತ್ತೋರ್ವ ಸದಸ್ಯೆ ಉಳ್ಳಿಯಡ ಡಾಟಿ ಪೂವಯ್ಯ ಅವರು ಮಾತನಾಡಿ, ತಲಕಾವೇರಿಯಲ್ಲಿ ವ್ಯವಸ್ಥಾಪನಾ ಸಮಿತಿಯೇ ಇಲ್ಲವಾಗಿದ್ದು, ಅಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಜನಧ್ವನಿ ರಹಿತವಾಗಿದ್ದು, ಜಿಲ್ಲಾಡಳಿತವು ನೇರ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿAದ ‘ಇ-ಪ್ರಸಾದ’ ಯೋಜನೆ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಬಂಕ್ಗಳ ರೀತಿ ತೀರ್ಥದ ಬಂಕ್ಗಳನ್ನು ನಿರ್ಮಿಸಿ ತೀರ್ಥ ವಿತರಣೆ ಮಾಡುವ ಯೋಜನೆಯನ್ನೂ ರೂಪಿಸಬಹದು ಎಂದು ಆತಂಕ ವ್ಯಕ್ತಪಡಿಸಿದರು. ತಕ್ಷಣವೇ ಈ ಯೋಜನೆಯನ್ನು ಕೈಬಿಡದಿದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಸದಸ್ಯರಾದ ಪುಡಿಯಂಡ ಕೆ.ಮುತ್ತಣ್ಣ ಅವರು ಹಾಜರಿದ್ದರು.