ಅನಿಲ್ ಎಚ್.ಟಿ.

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡ ಭಾರತದಲ್ಲಿ ದೇಶದ ಅಧಿಕಾರ ನಡೆಸುವ ರಾಜಕಾರಣಿಗಳು ಬಹು ಮುಖ್ಯ ಪಾತ್ರ ವಹಿಸುತ್ತಾರೆ.

ಸಂವಿಧಾನದ ಪ್ರಮುಖ ಅಂಗವಾಗಿರುವ ರಾಜಕಾರಣಿಗಳು ಈ ದೇಶದ ಜನತೆಯನ್ನು ಪ್ರತಿನಿಧಿಸುತ್ತಾರೆ. ಜನರ ಧ್ವನಿಯಾಗಿ ಪ್ರತಿನಿಧಿಗಳು ಸರ್ಕಾರದ ಗಮನಸೆಳೆಯುತ್ತಾರೆ. ರಾಜಕಾರಣಿಗಳೇ ದೇಶದ ಕಾನೂನು, ನಿಯಮಗಳನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಾ ಬಂದಿದ್ದಾರೆ. ರಾಜಕಾರಣಿಗಳ ನೆರವಿಲ್ಲದೇ ಯಾವುದೇ ಯೋಜನೆಗಳೂ ಜಾರಿಗೊಳ್ಳದಂಥ ಸ್ಥಿತಿ ಈ ದೇಶದಲ್ಲಿದೆ.

ಮತದಾರ ನೀಡಿದ ಮತಗಳ ಆಧಾರದಲ್ಲಿ ಗೆದ್ದು ಬಂದ ರಾಜಕಾರಣಿ ನಂತರದ ಹಂತದಲ್ಲಿ ಶಾಸಕ. ಸಚಿವ, ಮುಖ್ಯಮಂತ್ರಿ, ಪ್ರಧಾನಿ ಹೀಗೆ ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸುತ್ತಾ ಸಾಗುತ್ತಾನೆ. ಮತದಾರ ನೀಡಿದ ತನ್ನ ಹಕ್ಕಿನ ಮತದ ಆಧಾರದಲ್ಲಿಯೇ ರಾಜಕಾರಣಿಯೋರ್ವನ ಹುದ್ದೆಯೂ ಹಂತಹAತವಾಗಿ ಬೆಳೆಯುತ್ತಾ ಸಾಗುತ್ತದೆ.

ಆದರೆ, ಇಂಥ ರಾಜಕಾರಣಿ ಇಂದು ಮಾಡುತ್ತಿರುವುದೇನು ಎಂದು ಗಮನಿಸಿದಾಗ ಮತದಾರನ ಮನ ಆಕ್ರೋಷಗೊಳ್ಳುತ್ತದೆ. ಭ್ರಮನಿರಸನವಾಗುತ್ತದೆ.

ಗಮನಿಸಿ ನೋಡಿ..

ಈ ದೇಶದ ಪ್ರಧಾನಿಯನ್ನು ಕೊಲೆ ಮಾಡಿ ಎಂದು ಕೆಲವರು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿಯ ಮರಣ ಸಂಭವಿಸಿದಾಗ ಮಾತ್ರ ದೇಶಕ್ಕೆ ಉಳಿಗಾಲ ಎಂಬAಥ ಹೇಳಿಕೆಗಳು ವಿಶ್ವವ್ಯಾಪಿ ತಲುಪುತ್ತಿದೆ.

ಮತ್ತೊಂದು ಕಡೆ ಕರ್ನಾಟಕದ ವಿಪಕ್ಷ ನಾಯಕನನ್ನು ಮುಗಿಸಿ ಬಿಡಿ ಎಂಬ ಹೇಳಿಕೆಯನ್ನು ಆಡಳಿತ ಪಕ್ಷದ ಪ್ರಮುಖ ಸಚಿವರೋರ್ವರು ನೀಡುತ್ತಾರೆ.

ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕಾರಣಿಗಳು ಲಜ್ಜೆಗೆಟ್ಟಂತೆ ವರ್ತಿಸುತ್ತಿದ್ದಾರೆ. ಮಾನಗೆಟ್ಟಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಏನಾಗಿದೆ ಇವರಿಗೆ..? ಪ್ರಧಾನಿ ಮಾಡಿದ್ದು ಸರಿಯೋ ತಪ್ಪೋ, ದೇಶದ ಪ್ರಧಾನಿಯನ್ನು ಇಷ್ಟ ಪಡುತ್ತಾರೆಯೋ ಇಲ್ಲವೋ.. ಇದೆಲ್ಲವನ್ನೂ ಪ್ರಶ್ನಿಸಲು ದೇಶದ ಕಾನೂನಿದೆ. ಅದರಲ್ಲಿಯೂ ನಂಬಿಕೆ ಇಲ್ಲ ಎಂದಾದಲ್ಲಿ ಚುನಾವಣೆ ಎಂಬ ಪ್ರಜಾಪ್ರಭುತ್ವದಲ್ಲಿ ಮತದಾರನಿಗೆ ಪ್ರಬಲ ಅಸ್ತçವಿದೆ. ಈ ಅಸ್ತçದ ಮೂಲಕ ಮತದಾರ ತನಗಿಷ್ಟ ಬಂದವರನ್ನು ಚುನಾಯಿಸಲು ಸಾಧ್ಯವಿದೆ. ತನ್ನ ಮತ್ತು ತನ್ನ ಬೆಂಬಲಿಗರ ಆಯ್ಕೆಯನ್ನು ಯಾರೇ ಆದರೂ ಚುನಾವಣೆ ಸಂದರ್ಭ ಮತದಾನದ ಮೂಲಕ ತಿಳಿಸಬಹುದಾಗಿದೆ. ಯಾರು ಯಾರಿಗೆ ಪಾಠ ಕಲಿಸಬೇಕೋ, ಯಾರಿಗೆಲ್ಲಾ ಬುದ್ಧಿ ಕಲಿಸಬೇಕೋ ಅಂಥವರಿಗೆ ಮತ ಎಂಬ ಅಸ್ತçದ ಮೂಲಕ ಪಾಠ ಕಲಿಸಬಹುದಾಗಿದೆ.

ಕೆಲವು ರಾಜಕಾರಣಿಗಳ ಹೇಳಿಕೆ ನೋಡಿದರೆ ಇಂತಹ ರಾಜಕಾರಣಿಗಳನ್ನು ಪ್ರತಿನಿಧಿಯಾಗಿ ಹೊಂದಿರುವ ಬಗ್ಗೆಯೇ ನಾಚಿಕೆಯಾಗುತ್ತದೆ. ಹೆಣ್ಣಿನ ಸಿಂಧೂರದ ಬಗ್ಗೆ ಕ್ಷುಲ್ಲಕ ಹೇಳಿಕೆ ನೀಡುವುದು.. ಧರ್ಮ ಧರ್ಮಗಳ ಬಗ್ಗೆ ಕಿಡಿ ಹೊತ್ತಿಸಿ ಆ ಬೆಂಕಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ನೋಡುವುದು.. ನನ್ನ ಕೋಮು ಅಥವಾ ನನ್ನ ಜಾತಿ ಇಂಥ ಪಕ್ಷಕ್ಕೆ ಬೆಂಬಲ ಅಥವಾ ಇಂಥ ವ್ಯಕ್ತಿಗೆ ಬೆಂಬಲ ನೀಡುತ್ತದೆ. ನೀನು ಯಾವ ಪಕ್ಷ, ವ್ಯಕ್ತಿಗೆ ಬೆಂಬಲ ನೀಡುತ್ತೀಯಾ ಎಂಬAತೆ ಪ್ರಶ್ನಿಸುವುದು..

ಇವೆಲ್ಲಾ ಚುನಾವಣೆ ಸನಿಹದಲ್ಲಿ ಎದುರಾಗುತ್ತಿರುವ ಕಳವಳಕಾರಿ ವಿಚಾರಗಳು..

ನಿನ್ನೆಯವರೆಗೂ ಒಂದು ಪಕ್ಷದಲ್ಲಿದ್ದು ಆ ಪಕ್ಷವನ್ನೇ ಹೊಗಳಿ ಅಟ್ಟಕ್ಕೇರಿಸಿ, ಆ ಪಕ್ಷದ ಪ್ರಮುಖರನ್ನೇ ದೇವರು ಎಂದೆಲ್ಲಾ ಹೊಗಳಿ ನಂತರ ರಾತ್ರಿ ಕಳೆದು ಹಗಲಾಗುವುದರಲ್ಲಿ ಪಕ್ಷ ತ್ಯಜಿಸಿ ಮತ್ತೊಂದು ಪಕ್ಷ ಸೇರ್ಪಡೆಯಾಗುವುದು ಎಂಥ ರಾಜಕೀಯ, ಎಂಥ ಪ್ರಜಾಪ್ರಭುತ್ವ?

ಆ ಪಕ್ಷ ಸರಿಯಿಲ್ಲ, ಭಂಡರ ಪಕ್ಷ, ಭ್ರಷ್ಟಾಚಾರಿಗಳ ಪಕ್ಷ ಎಂದೆಲ್ಲಾ ಟೀಕಿಸುತ್ತಾ ವರ್ಷಾನುಗಟ್ಟಲೆ ಕಾಲಕಳೆದು ಕೊನೆಗೆ ರಾತ್ರೋರಾತ್ರಿ ಅಂತಹ ಪಕ್ಷವನ್ನೇ ಸೇರಿ ತಾನು ಸಭ್ಯಸ್ಥ, ತನಗಿದು ಅನಿವಾರ್ಯ ಎಂಬAತೆ ಫೋಸ್ ಕೊಡುವ ಅವಕಾಶವಾದಿ ರಾಜಕಾರಣಿಗಳಿಗೆ ಏನೆನ್ನಬೇಕು?

ರಾಜಕೀಯ ಸಮಾವೇಶಗಳು ರಾಜ್ಯದಲ್ಲಿ ಯಾವ ರೀತಿ ಗಬ್ಬೆಬ್ಬಿದೆ ಎಂದರೆ, ಯಾರನ್ನಾದರೂ ಹೀನಾಯವಾಗಿ ಟೀಕಿಸದೇ ಹೋದರೆ ತಾನೋರ್ವ ರಾಜಕಾರಣಿಯೇ ಅಲ್ಲ ಎಂದು ಅನೇಕರು ಭಾವಿಸಿದಂತಿದೆ. ಬೇರೆ ಬೇರೆ ಪಕ್ಷದಲ್ಲಿದ್ದರೂ ತಾವು ಒಳ್ಳೆಯ ಗೆಳೆಯರು ಎನ್ನುತ್ತಲೇ ಬಾಯಿಗೆ ಬಂದAತೆ ಬೈಯುತ್ತಾರೆ. ಟೀಕಿಸುತ್ತಾರೆ. ಮನಸ್ಸಿಗೆ ಬಂದAತೆ ಅವಹೇಳನಕಾರಿಯಾಗಿ ಹೇಳಿಕೆ ನೀಡುತ್ತಾರೆ.

ಇಂಥ ಅಸಭ್ಯ ಹೇಳಿಕೆಗಳನ್ನು ಆನಂದಿಸುವವರು. ಸಂತೋಷ ಪಡುವವರು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವವರು ಇರುವವರೆಗೆ ಇಂಥ ಹೇಳಿಕೆಗಳಿಗೆ ಕಡಿವಾಣ ಇಲ್ಲದಿಲ್ಲ.

ಇಂತಹÀ ರಾಜಕೀಯ ಪಕ್ಷಗಳಿಂದ ಯಾರು ಹೇಗೆ ತಾನೇ ಉತ್ತಮ ಸಮಾಜ ನಿರೀಕ್ಷಿಸಲು ಸಾಧ್ಯ ಹೇಳಿ?

ನಿಮಗೆ ಗೊತ್ತಿರಲಿ.. ಚುನಾವಣೆಗೆ ೩ ತಿಂಗಳ ಮುನ್ನವೇ ರಾಜ್ಯದಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳೂ ವಾರ್ ರೂಮ್ ಎಂದರೆ ಚುನಾವಣೆಯ ಸಮರ ಕೋಣೆ ಎಂಬ ಘಟಕ ಸ್ಥಾಪಿಸಿಕೊಂಡಿವೆ. ೨೦೦-೩೦೦ ಮಂದಿ ಈ ವಿಭಾಗದಲ್ಲಿ ದಿನನಿತ್ಯ ಕೆಲಸಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷ, ನಾಯಕರ ಪರ ಬಂದ ಹೇಳಿಕೆಗಳೇನು..? ಪ್ರತಿಯಾಗಿ ಬೇರೆ ಪಕ್ಷದವರು ನೀಡಿದ ಹೇಳಿಕೆಗಳೇನು? ಎಂಬುದೆಲ್ಲಾ ದಾಖಲಾಗುತ್ತವೆ. ಯಾವ ಜಿಲ್ಲೆ, ಯಾವ ಕ್ಷೇತ್ರದಲ್ಲಿ ಯಾವ ಪಕ್ಷ, ಯಾವ ನಾಯಕ ಹೇಗೆ ಕೆಲಸ ಮಾಡುತ್ತಿದ್ದಾನೆ. ಅಲ್ಲಿ ಪಕ್ಷದ ಬೆಳವಣಿಗೆ ಏನು ಎಂಬುದೆಲ್ಲವನ್ನೂ ಪ್ರತಿನಿತ್ಯ ಈ ವಾರ್ ರೂಮ್ ದಾಖಲಿಸುತ್ತಾ ವರಿಷ್ಠರಿಗೆ ಮಾಹಿತಿ ನೀಡುತ್ತಲೇ ಹೋಗುತ್ತದೆ.

ಎರಡೇ ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೊಡಗು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪ್ರತೀ ನಿತ್ಯದ ಬೆಳವಣಿಗೆಗಳು, ಸ್ಪರ್ಧಾಕಾಂಕ್ಷಿಗಳ ದಿನಚರಿ, ಯಾರು ಯಾರೊಂದಿಗೆ ಸಭೆ ನಡೆಸಿದರು, ಇಂಥವರಿಗೆ ಸ್ಪರ್ಧೆಗೆ ಅವಕಾಶ ನೀಡಿದರೆ ಬಂಡಾಯಗಾರರು ಯಾವ ರೀತಿಯಲ್ಲಿ ಸಮಸ್ಯೆ ತರುತ್ತಾರೆ, ಅದನ್ನು ನಿಭಾಯಿಸುವ ರೀತಿ ಯಾವುದು ಎಂಬೆಲ್ಲಾ ನಿರ್ಧಾರಗಳೂ ಬೆಂಗಳೂರಿನಲ್ಲಿರುವ ವಿವಿಧ ಪಕ್ಷಗಳ ವಾರ್ ರೂಮ್‌ನಲ್ಲಿ ನಡೆಯುತ್ತಲೇ ಇರುವ ಪ್ರಕ್ರಿಯೆಯಾಗಿದೆ.

ಚುನಾವಣೆ ಎಂಬುದು ಈಗ ಕೇವಲ ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿ ಮಾತ್ರ ಉಳಿದಿಲ್ಲ. ಇದೀಗ ಪಕ್ಕಾ ಮಾರ್ಕೇಂಟಿAಗ್ ತಂತ್ರಗಾರಿಕೆಯನ್ನೂ ಹೊಂದುವAತಾಗಿದೆ. ನೂರಾರು ಕೋಟಿಗಳನ್ನು ಪ್ರತೀ ಪಕ್ಷಗಳೂ ವಾರ್ ರೂಮ್‌ಗೆ ವಿನಿಯೋಗಿಸುತ್ತಾ ಪ್ರತೀ ಜಿಲ್ಲೆಯಲ್ಲಿಯೂ ತನ್ನ ರಹಸ್ಯ ಪ್ರತಿನಿಧಿಯನ್ನು ನೇಮಿಸಿ ಅವರಿಂದ ದೈನದಿಂದ ರಾಜಕೀಯ ಚಟುವಟಿಕೆಗಳ ಮಾಹಿತಿ ಸಂಗ್ರಹಿಸುತ್ತಿದೆ. ಯಾವುದೇ ಗುಪ್ತಚರ ಇಲಾಖೆಗೂ ಕಡಮೆಯಿಲ್ಲದಂತೆ ರಾಜಕೀಯ ಪಕ್ಷಗಳ ವಾರ್ ರೂಮ್ ಕಾರ್ಯೋನ್ಮುಖವಾಗಿದೆ.

ಇಂಥವರ ಗಮನ ಸೆಳೆಯಲೆಂದೇ ಕೆಲವು ರಾಜಕೀಯ ನಾಯಕರು ಎಗ್ಗಿಲ್ಲದಂತೆ ಹೇಳಿಕೆ ನೀಡುತ್ತಾ ಅವೆಲ್ಲಾ ವಾರ್ ರೂಮ್ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಟೀಕಾಸ್ತçವೇ ವರಿಷ್ಠರ ಗಮನ ಸೆಳೆಯುವ ರಾಜಕೀಯ ತಂತ್ರವಾಗಿರುವಾಗ ಸಭ್ಯಸ್ಥ ರಾಜಕಾರಣಿಗಳಿಗೆ ಹೈಕಮಾಂಡ್ ನಲ್ಲಿ ಎಲ್ಲಿದೆ ಬೆಲೆ ಎಂಬAತಾಗಿದೆ.

ಕೊಡಗಿಗೆ ಬೀಸದಿರಲಿ.

ಹಾಗೆ ಗಮನಿಸಿದರೆ ಕೊಡಗಿನಲ್ಲಿ ರಾಜಕೀಯ ಎಂಬುದು ನಿಜಕ್ಕೂ ಹದಗೆಟ್ಟಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲಿಗರು ಎಗ್ಗಿಲ್ಲದೆ ತಮಗಿಷ್ಟ ಬಂದAತೆ ಅನಿಸಿಕೆ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಹೊರತು ಪಡಿಸಿದರೆ ಕೊಡಗಿನ ರಾಜಕಾರಣಿಗಳು ನಾಲಗೆ ಹರಿಯಬಿಟ್ಟು ಬಾಯಿಗೆ ಬಂದAತೆ ಅಸಭ್ಯ ಹೇಳಿಕೆ ನೀಡಿದ ಉದಾಹರಣೆಗಳು ಕಡಮಯೇ

ಕೊಡಗಿನ ಎರಡೂ ಕ್ಷೇತ್ರದಲ್ಲಿನ ರಾಜಕಾರಣಿಗಳು ಯಾವುದೇ ಪಕ್ಷದವರಾಗಿರಲಿ. ಪರಸ್ಪರ ಗೆಳೆತನಕ್ಕೆ ಬೆಲೆಕೊಡುವವರು. ಇಲ್ಲಿನ ರಾಜಕಾರಣಿಗಳು ದ್ವೇಷಾಸೂಯೆ ಕಡಮೆ. ಇಂದಿಗೂ ಸ್ನೇಹಮಯ ಮನೋಭಾವ ಸ್ಥಳೀಯ ರಾಜಕಾರಣಿಗಳಲ್ಲಿದೆ. ಇದರಿಂದಾಗಿಯೇ ಕೊಡಗಿನಲ್ಲಿ ಸ್ವಚ್ಛ ರಾಜಕೀಯದ ಗಾಳಿ ಎಲ್ಲಾ ಪಕ್ಷಗಳಲ್ಲಿಯೂ ಕಂಡು ಬರುತ್ತಿದೆ. ಜನ ರೋಸಿ ಹೋಗುವಂತಹ ಹೇಳಿಕೆಗಳನ್ನು ಇಲ್ಲಿನ ರಾಜಕಾರಣಿಗಳು ನೀಡುತ್ತಿಲ್ಲ ಎಂಬುದೇ ಸಮಾಧಾನ. ಮುಂದೆಯೂ ಇಲ್ಲಿನ ರಾಜಕೀಯದ ತಂಗಾಳಿ ಅಸಭ್ಯತೆಯ ಬಿರುಗಾಳಿಯಾಗದೇ ಸ್ನೇಹಮಯ ವಾತಾವರಣದಲ್ಲಿಯೇ ಅಭ್ಯರ್ಥಿಗಳು ಚುನಾವಣೆ ಎದುರಿಸಲಿ..

ದೇಶದಲ್ಲಿ, ರಾಜ್ಯದಲ್ಲಿ ಬೀಸಿರುವ ಎಗ್ಗಿಲ್ಲದ ಅಸಭ್ಯ ಹೇಳಿಕೆಗಳ ಕೆಟ್ಟ ಗಾಳಿ ಕೊಡಗಿನ ರಾಜಕೀಯ ರಂಗದೊಳಕ್ಕೆ ಎಂದೆAದೂ ಬೀಸದಿರಲಿ.