ಮಡಿಕೇರಿ, ಮಾ. ೧೫: ಹಲವು ವರ್ಷಗಳಿಂದ ಕೊಡಗಿನಲ್ಲಿರುವ ಬಿಜೆಪಿಯ ಇಬ್ಬರು ಶಾಸಕರುಗಳಿಂದ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಶಾಹಿದ್ ತೆಕ್ಕಿಲ್ ಆರೋಪಿಸಿದ್ದಾರೆ. ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೊಡಗಿನಲ್ಲಿ ಕಾಂಗ್ರೆಸ್ ಅಲೆ ಬೀಸುತ್ತಿದೆ. ಹಿರಿಯ ಕಿರಿಯ ನಾಯಕರ ಒಗ್ಗಟ್ಟಿನ ಬಲದಿಂದ ಪಕ್ಷ ಬಲಿಷ್ಠವಾಗಿದೆ ಎಂದರು.

ಮನೆ ಕಳೆದುಕೊಂಡವರಿಗೆ ಅನೇಕರಿಗೆ ಇನ್ನೂ ಕೂಡ ಪರಿಹಾರ ಸಿಕ್ಕಿಲ್ಲ. ಈ ಬಾರಿ ಕೃಷಿ ಹಾನಿಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸುವಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ಅವರು ದೂರಿದರು. ಅತಿಯಾದ ಮಳೆಯಿಂದ ಗುಡ್ಡ ಕುಸಿತದ ಮಣ್ಣು ಹೊಳೆಯಲ್ಲಿ ತುಂಬಿದೆ. ಇದರಿಂದ ನೀರು ಗದ್ದೆಗಳಿಗೆ ಸೇರುತ್ತಿದೆ. ಹೀಗಿದ್ದರೂ ಹೂಳು ತೆಗೆಯುವ ಕಾರ್ಯಾಚರಣೆ ನಡೆದಿಲ್ಲ. ಇನ್ನು ಮೂರು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಜನರ ರಕ್ಷಣೆಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಅವರು ಪ್ರಶ್ನಿಸಿದರು.

ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿ ವೇತನ ರದ್ದುಪಡಿಸಿ ಅವರು ಮುಖ್ಯವಾಹಿನಿಗೆ ಬರದಂತೆ ಹಿಂದಕ್ಕೆ ತಳ್ಳುವ ವ್ಯವಸ್ಥಿತ ಪ್ರಯತ್ನ ಈಗಿನ ಸರ್ಕಾರದಿಂದ ನಡೆದಿದೆ ಎಂದು ದೂರಿದರು. ವಕ್ಫ್ ಆಸ್ತಿಯನ್ನು ಸರಕಾರ ರಕ್ಷಿಸುತ್ತಿಲ್ಲ. ಚುನಾವಣೆ ಹೊಸ್ತಿಲಲ್ಲಿ ಅಲ್ಪಸಂಖ್ಯಾತರ ಮತಗಳನ್ನು ತೆಗೆದುಹಾಕುವ ಕೆಲಸವನ್ನೂ ಹಲವೆಡೆ ಮಾಡಲಾಗುತ್ತಿದೆ.

ದಕ್ಷಿಣ ಕನ್ನಡ ಸಂಪಾಜೆ ಗ್ರಾ.ಪಂ. ಸದಸ್ಯ ಅಬುಸಾಲಿ ಗೂನಡ್ಕ ಮಾತನಾಡಿ, ಮಳೆಯಿಂದಾಗಿ ಆರೇಳು ಲಕ್ಷ ಬೆಳೆ ನಷ್ಟಕ್ಕೆ ಕೇವಲ ೨೨ ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಪಾಜೆ ವ್ಯಾಪ್ತಿಯಲ್ಲಿ ೪೧ ಮನೆಗಳಿಗೆ ಹಾನಿಯಾಗಿದ್ದು, ಅಲ್ಪ ಮೊತ್ತದ ಪರಿಹಾರ ನೀಡಲಾಗಿದೆ ಎಂದು ದೂರಿದರು. ಪಯಸ್ವಿನಿ ನದಿಯ ಹೂಳೆತ್ತಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ಪ್ರಮುಖರಾದ ಮೊಹಮದ್ ರಫೀಕ್, ಅಬ್ದುಲ್ ಖಾದರ್, ಸುಳ್ಯ ಯುವ ಬ್ರಿಗೇಡ್ ಅಧ್ಯಕ್ಷ ಜುರೈದ್ ತೆಕ್ಕಿಲ್ ಉಪಸ್ಥಿತರಿದ್ದರು.