ಮುಳ್ಳೂರು, ಮಾ. ೧೫: ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿರುವ ಬಿಜೆಪಿ ಸರಕಾರವನ್ನು ವಜಾಗೊಳಿಸಿ ಚುನಾವಣೆಯಲ್ಲಿ ರೈತ, ದೀನ ದಲಿತರ, ಕಾರ್ಮಿಕರ, ಬಡವರ ಪರ ಚಿಂತನೆಯುಳ್ಳ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಮುಖ್ಯಮಂತ್ರಿ ಮಾಡುವ ಮೂಲಕ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ತಳಹದಿಯಲ್ಲೆ ಸಂಘಟಿತರಾಗಬೇಕಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿ ನಾಪಂಡ ಮುತ್ತಪ್ಪ ಅಭಿಪ್ರಾಯಪಟ್ಟರು.
ಅವರು ಸಮೀಪದ ಆಲೂರುಸಿದ್ದಾಪುರದಲ್ಲಿ ಜೆಡಿಎಸ್ ಪಕ್ಷದ ನೂತನ ಕಚೇರಿ ಉದ್ಘಾಟನೆ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮತದಾರರು ಜಾಗೃತ ಗೊಂಡಿದ್ದು ಜೆಡಿಎಸ್ ಪಕ್ಷದತ್ತ ಒಲವು ತೋರುತ್ತಿದ್ದಾರೆ ರಾಜ್ಯದ ಜನತೆ ಬಿಜೆಪಿ ಸರಕಾರದ ದುರಾಡಳಿತಕ್ಕೆ ಬೇಸರಗೊಂಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬದಲಾಗುತ್ತಿರುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಸಂಘಟಿತರಾಗಿ ಜೆಡಿಎಸ್ ಪಕ್ಷದ ಸಿದ್ದಾಂತ, ಜನಪರ ಕಾರ್ಯಕ್ರಮಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.
ಮಡಿಕೇರಿ ಕ್ಷೇತ್ರದ ಜೆಡಿಎಸ್ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಜೆಡಿಎಸ್ ಹೋರಾಟದ ಬಗ್ಗೆ ಚಿಂತನೆಯುಳ್ಳ ಪಕ್ಷವಾಗಿದೆ ಎಂದರು.
ತಾಲೂಕು ಜೆಡಿಎಸ್ ಮುಖಂಡ ನಾಗರಾಜಯ್ಯ, ಜೆಡಿಎಸ್ ಮುಖಂಡರಾದ ಆದಿಲ್ಪಾಷ, ಎಸ್.ಜೆ. ಪ್ರಸನ್ನಕುಮಾರ್, ಬಗ್ಗನ ಅನಿಲ್, ಜೆಡಿಎಸ್ ಮಹಿಳಾ ಘಟಕದ ರುಬಿನಾ ಮಾತನಾಡಿದರು.
ಸಭೆಯಲ್ಲಿ ಪಕ್ಷದ ಪ್ರಮುಖರಾದ ಎ.ಜಿ. ವಿಜಯ್, ಎಂ.ಡಿ. ಲತ, ಕುಸುಮ, ಕಡ್ಯದ ಕುಮಾರ್ ಮುಂತಾದವರು ಹಾಜರಿದ್ದರು.