ಮಡಿಕೇರಿ, ಮಾ. ೧೩: ವಿಶೇಷ ಸಂಸ್ಕೃತಿ, ಆಚಾರ-ವಿಚಾರ, ವಿಶೇಷ ಹಬ್ಬಗಳನ್ನು ಆಚರಿಸುತ್ತಿರುವ ಕೊಡವ ಜನಾಂಗ ಇಡೀ ವಿಶ್ವದಲ್ಲೇ ಗಮನಸೆಳೆದಿದೆ. ಇದೀಗ ಜಿಲ್ಲೆಯಾದ್ಯಂತ ‘ಕೊಡವ ಲಿಪಿ’ ಬಳಕೆಯ ಬಗ್ಗೆ ಒಲವು ಹೆಚ್ಚುತ್ತಿದೆ.
ಐನ್ಮನೆ, ರಸ್ತೆ, ಹೊಟೇಲ್, ವಾಹನ, ಅಂಗಡಿಗಳಲ್ಲಿ ಕೊಡವ ಲಿಪಿಯಲ್ಲಿ ಬೋರ್ಡ್ ಹಾಕಿ ಜಿಲ್ಲೆಯಲ್ಲಿ ಕೊಡವ ಲಿಪಿಗೆ ಬೆಂಬಲ ನೀಡಿ, ಕೊಡವ ಭಾಷೆ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸುತ್ತಿರುವ ಹೊಸ ‘ಟ್ರೆಂಡ್’ ಕೊಡಗು ಜಿಲ್ಲೆಯಲ್ಲಿ ಆರಂಭಗೊAಡಿದೆ.
ಐ.ಮಾ. ಮುತ್ತಣ್ಣ ರಚಿಸಿದ ಕೊಡವ ಲಿಪಿ ಬಳಕೆ
ಕೊಡವ ಭಾಷೆಯಲ್ಲಿ ಏಳು ಮಂದಿ ಲಿಪಿ ರಚಿಸಿದ್ದಾರೆ. ಆದರೆ ಅಂತಿಮವಾಗಿ ತ್ರಿಭಾಷಾ ಸಾಹಿತಿ ಐ.ಮಾ ಮುತ್ತಣ್ಣ ಅವರು ೧೯೭೦ರಲ್ಲಿ ರಚಿಸಿದ್ದ ಕೊಡವ ಲಿಪಿಯನ್ನು ಎಲ್ಲರೂ ಇದೀಗ ಜಿಲ್ಲೆಯಲ್ಲಿ ಬಳಸುತ್ತಿದ್ದಾರೆ. ಯಾರು ರಚಿಸಿದ್ದ ಲಿಪಿ ಬಳಸಬೇಕೆಂಬ ಗೊಂದಲ ಈ ಮೊದಲು ಉಂಟಾಗಿತ್ತು.
ಕಳೆದ ತಿಂಗಳು ಫೆಬ್ರವರಿ ೨೧ ರಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸಭೆ ನಡೆಸಿ ಐ.ಮಾ ಮುತ್ತಣ್ಣ ರಚಿಸಿದ್ದ ಕೊಡವ ಲಿಪಿಯನ್ನು ಬಳಸಲು ಅಂತಿಮವಾಗಿ ತೀರ್ಮಾನ ಕೈಗೊಂಡು ಸರ್ಕಾರದ ಅಂಗೀಕಾರ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು.
ಕೊಡವ ಸಾಹಿತ್ಯ ಅಕಾಡೆಮಿ ಸಭೆಯಲ್ಲಿ ಮೈಸೂರಿನ ಸೆಂಟ್ರಲ್ ಇನ್ಸಿ÷್ಟಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜ್ನ ಪ್ರತಿನಿಧಿಗಳು ಪಾಲ್ಗೊಂಡು, ಸರಳವಾಗಿ ೧೯೭೦ರಲ್ಲಿ ಐ.ಮಾ ಮುತ್ತಣ್ಣ ರಚಿಸಿದ್ದ ಕೊಡವ ಲಿಪಿಯನ್ನು ಬಳಸಲು ನಿರ್ಧರಿಸಲಾಯಿತು.
ಅದಲ್ಲದೇ ಐ.ಮಾ. ಮುತ್ತಣ್ಣ ರಚಿಸಿರುವ ಕೊಡವ ಲಿಪಿಯು ಸರಳವಾಗಿ ಜನರಿಗೆ ಬಳಸಲು ಸುಲಭವಾಗುತ್ತದೆ ಎಂದು ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದರು. ಐ.ಮಾ. ಮುತ್ತಣ್ಣ ರಚಿಸಿರುವ ಕೊಡವ ಲಿಪಿಯನ್ನು ಜಿಲ್ಲೆಯ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಅವರು ಉಳಿಸಿಕೊಂಡು ಬಂದು, ಶಾಲೆಗಳಲ್ಲಿ ಹಾಗೂ ಕೊಡವ ಜನಾಂಗದವರಲ್ಲಿ ಕೊಡವ ಲಿಪಿಯನ್ನು ಅಭ್ಯಾಸ ಮಾಡಿಸುತ್ತಿದ್ದರು. ಅದಲ್ಲದೇ ಕೊಡವ ಲಿಪಿ ಬಳಸಬೇಕೆಂದು ಅರಿವು ಮೂಡಿಸುತ್ತಿದ್ದರು.
ಕೊಡವ ಲಿಪಿಯನ್ನು ಕೈಯಲ್ಲಿಯೇ ಎಡಿಟ್ ಮಾಡಲಾಗುತ್ತಿದೆ. ಕೊಡವ ಲಿಪಿ ಕಂಪ್ಯೂಟರ್ ತಂತ್ರಾAಶದಲ್ಲಿ ಇಲ್ಲ. ಕನ್ನಡ ಭಾಷಾ ನುಡಿಯಂತೆ ತಂತ್ರಾAಶದಲ್ಲಿ ಕೊಡವ ಲಿಪಿ ಬಂದರೆ, ಕೊಡವ ಲಿಪಿಯನ್ನು ಎಲ್ಲರೂ ಬಳಸಲು ಸಹಕಾರಿಯಾಗುತ್ತದೆ. ಅದಲ್ಲದೇ ಎಲ್ಲರೂ ಮೊಬೈಲ್ ಬಳಸುವವರು, ಕೊಡವ ಲಿಪಿ ಆ್ಯಪ್ ಕೂಡ ಚಾಲನೆಗೆ ಬಂದರೆ, ಮತ್ತಷ್ಟು ಕೊಡವ ಲಿಪಿಯನ್ನು ಜನರು ಬಳಸುತ್ತಾರೆ.
ಕೊಡವ ಲಿಪಿಯನ್ನು ಡಿಜಿಟಲೀಕರಣ ಮಾಡಲು ಕರ್ನಾಟಕ ಭಾಷಾ ಅಲ್ಪಸಂಖ್ಯಾತ ಒಕ್ಕೂಟದ ಅಧ್ಯಕ್ಷ ಪ್ರತೀಕ್ ಪೊನ್ನಣ್ಣ ಡಿಜಿಟಲ್ ತಂಡದೊAದಿಗೆ ಚರ್ಚೆ ನಡೆಸುತ್ತಿದ್ದು, ಸದ್ಯದಲ್ಲೇ ಕೊಡವ ಲಿಪಿ ನುಡಿಯಲ್ಲಿ ಬರುವ ಸಾಧ್ಯತೆ ಇದೆ. ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ಅಧ್ಯಕ್ಷ ಪ್ರತೀಕ್ ಪೊನ್ನಣ್ಣ ‘ಕೊಡವ ಲಿಪಿ’ಯನ್ನು ಬಳಸುವಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಐನ್ಮನೆ ನಾಮಫಲಕಕ್ಕೆ ಕನ್ನಡ ಫಲಕದೊಂದಿಗೆ ಕೊಡವ ಲಿಪಿ ಫಲಕ ಅಳವಡಿಸುವಂತೆ ಪ್ರತೀಕ್ ಪೊನ್ನಣ್ಣ ಕರೆ ನೀಡಿದ್ದಾರೆ.
-ಕೆ.ಎಂ ಇಸ್ಮಾಯಿಲ್ ಕಂಡಕರೆ