ಚೆಯ್ಯಂಡಾಣೆ, ಮಾ. ೧೩. ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ‘ಎ’ ಉಪಕೇಂದ್ರ ವ್ಯಾಪ್ತಿಯ ಚೆಯ್ಯಂಡಾಣೆ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ನಕಾವತಿ ಮಕ್ಕಳ ತಾಯಂದಿರಿಗೆ ಎದೆಹಾಲಿನ ಮಹತ್ವದ ಬಗ್ಗೆ ವಿವರಿಸಿದರು. ಆರು ತಿಂಗಳವರೆಗೆ ಎದೆ ಹಾಲು ಮಾತ್ರ ಕೊಡಬೇಕು. ಆರು ತಿಂಗಳ ನಂತರ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ಕೊಡುವುದರಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಬರುವುದಿಲ್ಲ, ಹಾಗೂ ಮಕ್ಕಳ ಲಸಿಕೆಗಳನ್ನು ಕಾಲಕ್ಕೆ ಸರಿಯಾಗಿ ನಿಗದಿತ ಸಮಯದಲ್ಲಿ ಕೊಡಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿ ಮುಂದಿನ ದಿನಗಳಲ್ಲಿ ರೋಗಗಳು ಬರುವುದನ್ನು ತಡೆಗಟ್ಟಬಹುದು ಎಂದರು. ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಪಾಲ್ಗೊಂಡಿದ್ದರು. ಇದರಲ್ಲಿ ಪ್ರಥಮ ಬಹುಮಾನ ಶಶಿನ್ ಕಾರ್ಯಪ್ಪ, ದ್ವಿತೀಯ ಬಹುಮಾನ ಅರುಶಿ, ತೃತೀಯ ಬಹುಮಾನ ಆರಾಧ್ಯ ಪಡೆದುಕೊಂಡರು.ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತಿತ್ತರರು ಇದ್ದರು.