ಮಡಿಕೇರಿ, ಮಾ. ೧೪: ಬಿಸಿಲ ಬೇಗೆಯಿಂದ ಕಾದಿದ್ದ ಭೂಮಿಗೆ ಕೆಲವೆಡೆ ಮಳೆ ಸುರಿದು ತಂಪಾಗಿಸಿದೆ. ಜಿಲ್ಲೆಯ ನಾಪೋಕ್ಲು, ಮೂರ್ನಾಡು, ಸುಂಟಿಕೊಪ್ಪ, ಇನ್ನಿತರ ಕಡೆಗಳಲ್ಲಿ ಮಳೆಯಾಗಿದ್ದು, ಸುಡು ಬಿಸಿಲ ತಾಪದಿಂದ ಬಸವಳಿದಿದ್ದ ಜನರು ಸಂತಸಗೊAಡಿದ್ದಾರೆ.
ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಸಾಧಾರಣ ಮಳೆಯಾಗಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತ ಮಳೆಯಾಗಿದ್ದು ಕಾಫಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಜನವರಿ ಎರಡನೇ ವಾರದಲ್ಲಿ ಈ ವ್ಯಾಪ್ತಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದ್ದು, ಆ ಬಳಿಕ ಮಳೆಯಾಗದೆ ಬೆಳೆಗಾರರು ಸಮಸ್ಯೆ ಎದುರಿಸಿದ್ದರು.
ಕಾಫಿಯ ಹೂಗಳು ಅಲ್ಪ ಪ್ರಮಾಣದಲ್ಲಿ ಅರಳಿದ್ದು ಬಹುತೇಕ ಹೂಗಳು ಅರಳುವ ಸಂದರ್ಭ ಇದಾಗಿದೆ. ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದರು. ಹಲವು ಬೆಳೆಗಾರರು ನೀರಿನ ಮೂಲವನ್ನ ಅರಸಿ ತೋಟಗಳಿಗೆ ತುಂತುರು ನೀರಾವರಿ ವ್ಯವಸ್ಥೆ ಕೈಗೊಂಡಿದ್ದರು. ಬಹುತೇಕ ಭಾಗಗಳಲ್ಲಿ ನೀರಿನ ಮೂಲಗಳು ಇಳಿಮುಖಗೊಂಡಿದ್ದು ತುಂತುರು ನೀರಾವರಿ ವ್ಯವಸ್ಥೆಗೂ ತೊಡಕಾಗಿತ್ತು. ಇದೀಗ ಮಳೆ ಆಗಿರುವುದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಬೀರಿದೆ.
ಸುಂಟಿಕೊಪ್ಪ: ಸುಂಟಿಕೊಪ್ಪ ವ್ಯಾಪ್ತಿಯ ಗರಗಂದೂರು, ಹರದೂರು, ಪನ್ಯ ಭಾಗಗಳಲ್ಲಿ ಇಂದು ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆಯಿಂದ ಬಿಸಿಲಿನ ಬೇಗೆಗೆ ಇಳೆ ತಂಪಾಯಿತು. ಪನ್ಯ ತೋಟದ ಎಸ್.ಬಿ. ಶಂಕರ್ ಅವರ ತೋಟದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಎಸ್.ಬಿ. ಶಂಕರ್ ಅವರ ಮನೆಯ ಮುಂದೆ ಹೂಗಳನ್ನು ಹರಡಿದ ರೀತಿಯಲ್ಲಿ ಶ್ವೇತಕಲ್ಲು ಸ್ಪರ್ಶಗೊಂಡಿದ್ದು, ನೋಡುಗರಿಗೆ ಮುದ ನೀಡಿದವು.