ಮಡಿಕೇರಿ, ಮಾ. ೧೩: ಜಿಲ್ಲೆಯ ಮುಸ್ಲಿಂ ಸಮುದಾಯದ ಬಡ ಮತ್ತು ಅನಾಥ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹವನ್ನು ಕಳೆದ ೧೯ ವರ್ಷಗಳಿಂದ ಉಚಿತವಾಗಿ ನಡೆಸಿಕೊಂಡು ಬರುತ್ತಿರುವ ಅಲ್ ಅಮಿನ್ ಕೊಡಗು ಜಿಲ್ಲಾ ಸಮಿತಿ ಈ ಬಾರಿ ಹತ್ತು ಜೋಡಿ ಅರ್ಹ ಹೆಣ್ಣು ಮಕ್ಕಳ ವಿವಾಹವನ್ನು ನಡೆಸಿಕೊಡಲು ನಿರ್ಧರಿಸಿದ್ದು, ಈ ಸಾಮೂಹಿಕ ವಿವಾಹ ಸಮಾರಂಭ ತಾ. ೧೫ ರಂದು (ನಾಳೆ) ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ನಡೆಯಲಿದೆ.

ಇದುವರೆಗೆ ೪೪೫ ಅರ್ಹ ಕನ್ಯೆಯರ ವಿವಾಹವನ್ನು ಉಚಿತವಾಗಿ ನಡೆಸಿಕೊಟ್ಟ ಕೀರ್ತಿ ಅಲ್ ಅಮಿನ್ ಸಂಸ್ಥೆಯದ್ದಾಗಿದೆ. ಮಡಿಕೇರಿಯ ಸಮಾಜ ಸೇವಕ ಎನ್.ಎ. ಅಬ್ದುಲ್ ಲತೀಫ್ ಹಾಜಿ ಅವರು ಹತ್ತೊಂಭತ್ತು ವರ್ಷಗಳ ಹಿಂದೆ ಕೆಲವು ಸಮಾನ ಮನಸ್ಕರನ್ನು ಒಂದು ಗೂಡಿಸಿ ರಚನೆ ಮಾಡಿದ ಅಲ್ ಅಮಿನ್ ಸಂಸ್ಥೆ ಆರಂಭದ ವರ್ಷಗಳಲ್ಲಿ ಬೆರಳೆಣಿಕೆಯ ಬಡ ಹೆಣ್ಣು ಮಕ್ಕಳ ವಿವಾಹವನ್ನು ಸಾರ್ವಜನಿಕರ ದೇಣಿಗೆ ಪಡೆದು ನಡೆಸಿಕೊಡುತ್ತಾ ಬರುತ್ತಿದ್ದು, ಮುಂದುವರಿದು ಪ್ರತಿ ವರ್ಷ ತಲಾ ೨೫ ಅರ್ಹ ಕನ್ಯೆಯರಿಗೆ ಕಂಕಣಭಾಗ್ಯವನ್ನು ಒದಗಿಸುತ್ತಾ ಬಂತು.

ಸಮಿತಿಯು ಬಡ ಮುಸ್ಲಿಂ ಕುಟುಂಬದ ವಧುವಿಗೆ ತಲಾ ಐದು ಪವನ್‌ಗಳ ಚಿನ್ನಾಭರಣವನ್ನು ಕೊಡುತ್ತಿದ್ದು, ವಧೂ-ವರರಿಗೆ ಉಡುಪು ಹಾಗೂ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನೂ ಮಾಡಲಿದೆ.

ಸಮಿತಿಯು ಆರಂಭಗೊAಡ ೪ನೇ ವರ್ಷದಲ್ಲಿ ೪೨ ಅರ್ಹ ಹೆಣ್ಣುಮಕ್ಕಳ ವಿವಾಹವನ್ನು ಒಂದೇ ದಿನ, ಒಂದೇ ವೇದಿಕೆಯಲ್ಲಿ ನಡೆಸಿಕೊಡುವ ಮೂಲಕ ಸಾರ್ವಜನಿಕರ ಗಮನ ಸೆಳೆದಿತ್ತು.

ವಿವಾಹಿತರಾಗುವ ಹೆಣ್ಣು ಹಾಗೂ ಗಂಡಿಗೆ ೨೧ ವರ್ಷ ಪ್ರಾಯವಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಹೆಣ್ಣು ಮಕ್ಕಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ವಿವಾಹದ ವೆಚ್ಚ ಭರಿಸಲು ಅಲ್ ಅಮಿನ್ ಸಂಸ್ಥೆಯ ಮಹಾಪೋಷಕ ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಅವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಅಧ್ಯಕ್ಷ ಕುಶಾಲನಗರದ ಬಿ.ಎಚ್. ಅಹಮದ್, ಅಬ್ದುಲ್ ಲತೀಫ್ ಹಾಜಿ ಹಾಗೂ ಕಾರ್ಯಕರ್ತರು, ಸಮಾಜದ ಕೊಡುಗೈ ದಾನಿಗಳ ಸಹಕಾರ ಪಡೆಯುವಲ್ಲಿ ಈಗಾಗಲೇ ಕಾರ್ಯೋನ್ಮುಖರಾಗಿದ್ದಾರೆ.