ಕುಶಾಲನಗರ, ಮಾ. ೧೧: ಟಿಬೆಟಿಯನ್ ನೂತನ ವರ್ಷ ಲೋಸಾರ್ ಅಂಗವಾಗಿ ಸಮೀಪದ ಬೈಲುಕುಪ್ಪೆ ಟಿಬೆಟನ್ ನಿರಾಶ್ರಿತ ಶಿಬಿರದಲ್ಲಿ ವಿಶೇಷ ಕಾರ್ಯಕ್ರಮಗಳು ಜರುಗಿದವು. ೧೫ ದಿನಗಳ ಕಾಲ ನಡೆದ ಹೊಸ ವರ್ಷ ಆಚರಣೆಯ ಅಂಗವಾಗಿ ಶಿಬಿರದ ಎಲ್ಲೆಡೆ ಸಂಭ್ರಮ ಉತ್ಸವ ಮನೆ ಮಾಡಿತ್ತು.

ಬೈಲುಕುಪ್ಪೆಯ ಗೋಲ್ಡನ್ ಟೆಂಪಲ್ ಆವರಣದಲ್ಲಿ ವಿಶ್ವದ ಅತಿ ದೊಡ್ಡ ಪರದೆ ಎಂದು ಖ್ಯಾತಿ ಪಡೆದಿರುವ ಬೃಹತ್ ಪರದೆಗಳ ಅನಾವರಣ ಕಾರ್ಯಕ್ರಮಗಳು ಕೂಡ ನಡೆಯಿತು.

ಧಾರ್ಮಿಕ ಗುರುಗಳಾಗಿದ್ದ ಗುರು ಪದ್ಮ ಸಂಭವ ಮತ್ತು ಅಧಿಕ ಆಯುಷ್ಯ ನೀಡುತ್ತದೆ ಎಂದು ನಂಬಿಕೆ ಹೊಂದಿರುವ ಅಮಿತಾಯುಶ್ ಚಿತ್ರಪರದೆಗಳನ್ನು ಅನಾವರಣ ಗೊಳಿಸಲಾಯಿತು. ಕೇವಲ ಅರ್ಧ ಗಂಟೆಗಳಷ್ಟೇ ಅವಧಿಗೆ ಸೀಮಿತವಾಗಿ ಪ್ರದರ್ಶನಗೊಂಡ ಚಿತ್ರಪರದೆ ವೀಕ್ಷಿಸಲು ಬೆಳಗಿನ ಜಾವ ೭ ಗಂಟೆಗೆ ಶಿಬಿರ ಮತ್ತು ದೇಶ ವಿದೇಶಗಳ ಐದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ವಿಶ್ವಶಾAತಿಗಾಗಿ ಕಳೆದ ೧೫ ದಿನಗಳಿಂದ ಗೋಲ್ಡನ್ ಟೆಂಪಲ್ ಸಭಾಂಗಣದಲ್ಲಿ ಬೌದ್ಧ ಭಿಕ್ಷುಗಳು ವಿಶೇಷ ಹೋಮ ಹವನ ಸೇರಿದಂತೆ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು.