ಮಡಿಕೇರಿ, ಮಾ. ೧೧: ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಸಂಬAಧಿಸಿ ದಂತೆ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಕೊಡವ ಭಾಷಿಕ ಜನಾಂಗದವರನ್ನು ಅವಹೇಳನ ಮಾಡಿದ್ದಾರೆ ಎಂದು ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟ ಹಾಗೂ ಕೊಡವ ಭಾಷಿಕ ಸಮುದಾಯಗಳ ಕೂಟ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಸರ ಚಂಗಪ್ಪ, ಪುಟ್ಟ ಜಿಲ್ಲೆ ಕೊಡಗಿನಲ್ಲಿ ಎಲ್ಲಾ ಜಾತಿ ಜನಾಂಗದವರು ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸುತ್ತಿದ್ದಾರೆ. ಪ್ರತಿಯೊಂದು ಜನಾಂಗಕ್ಕೂ ತಮ್ಮ ಹಕ್ಕನ್ನು ಪಡೆಯುವ ಸ್ವಾತಂತ್ರ‍್ಯವನ್ನು ಸಂವಿಧಾನ ನೀಡಿದೆ. ಕೊಡವ ಭಾಷಿಕ ಜನಾಂಗ ತನ್ನ ಹಕ್ಕನ್ನು ಪಡೆಯಲು ನಾಚಪ್ಪ ಅವರ ಅಪ್ಪಣೆ ಪಡೆಯಬೇಕಾಗಿಲ್ಲ ಎಂದರು.

ಕೊಡವ ಭಾಷಿಕರ ಕುಲಶಾಸ್ತ್ರ ಅಧ್ಯಯನಕ್ಕಾಗಿ ೨೦೨೦ ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಪರಿಣಾಮ ಇದೀಗ ಸ್ಪಂದನ ದೊರೆತಿದೆ. ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವರು ಕುಲಶಾಸ್ತç ಅಧ್ಯಯನಕ್ಕಾಗಿ ರೂ.೨೫ ಲಕ್ಷಗಳನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಈ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿರುವ ನಾಚಪ್ಪ ಅವರು ಕೊಡವ ಭಾಷಿಕರ ವಿರುದ್ಧ ಅವಹೇಳನ ಮಾಡಿದ್ದಾರೆ. ಕೊಡವ ಕುಲಶಾಸ್ತç ಅಧ್ಯಯನಕ್ಕೆ ನಾವು ವಿರೋಧ ವ್ಯಕ್ತಪಡಿಸಿಲ್ಲ, ಅವರ ಹಕ್ಕನ್ನು ಅವರು ಮಂಡಿಸಿದ್ದಾರೆ, ನಮ್ಮ ಹಕ್ಕನ್ನು ನಾವು ಕೇಳಿದ್ದೇವೆ ಎಂದು ತಿಳಿಸಿದರು.

ಕೊಡವ ಭಾಷಿಕ ಮೂಲ ನಿವಾಸಿಗಳು ಶ್ರೀಮಂತ ಕೊಡವ ಸಂಸ್ಕೃತಿಯ ಏಳಿಗೆಗೆ ಕಾರಣೀಭೂತರಾಗಿದ್ದಾರೆ. ಕೊಡಗಿನ ಮಂದ್, ಮಾನಿ, ದೇವಾಸ್ಥಾನಗಳಲ್ಲಿ ಸ್ಥಾನಮಾನಗಳನ್ನು ವಹಿಸಿಕೊಂಡು ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಯ ಪಾಲುದಾರರಾಗಿದ್ದಾರೆ. ಆದರೆ ನಾಚಪ್ಪ ಅವರು ಕೊಡವ ಭಾಷಿಕ ಮೂಲ ನಿವಾಸಿಗಳನ್ನು ಟೀಕಿಸುವ ಭರದಲ್ಲಿ ಹುಲಿ, ಕಾಡು ಬೆಕ್ಕು ಪದ ಬಳಕೆಯ ಮೂಲಕ ಹೋಲಿಕೆ ಮಾಡಿದ್ದು, ಇದು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನವಾಗಿದೆ. ಅಲ್ಲದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪಾಧ್ಯಕ್ಷೆ ಬಬ್ಬಿರ ಸರಸ್ವತಿ ಮಾತನಾಡಿ, ತಮ್ಮ ಸಂಘಟನೆಯ ಮೂಲಕ ತಮಗೆ ಬೇಕಾದ ಹಕ್ಕನ್ನು ಕೇಳಲಿ, ಅದು ಬಿಟ್ಟು ಕೊಡವ ಭಾಷಿಕರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ. ಮೂಲೆಗುಂಪಾಗಿದ್ದ ನಮಗೆ ಈಗ ಜಾಗೃತಿ ಮೂಡಿದೆ, ನಮ್ಮ ಹಕ್ಕನ್ನು ಪಡೆಯುವುದು ಹೇಗೆಂದು ತಿಳಿದಿದೆ ಎಂದು ಹೇಳಿದರು.

ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ ನಾಚಪ್ಪ ಅವರ ಬಗ್ಗೆ ಕೊಡವ ಸಮಾಜಗಳು ಎಚ್ಚೆತ್ತುಕೊಳ್ಳಬೇಕು ಎಂದರು.

ಕೊಡವ ಭಾಷಿಕ ಸಮುದಾಯಗಳ ಕೂಟದ ಉಪಾಧ್ಯಕ್ಷ ಪಿ.ಜಿ. ಅಯ್ಯಪ್ಪ ನಾಚಪ್ಪ ಅವರ ಹೇಳಿಕೆಯನ್ನು ಖಂಡಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಜಿ.ಎ. ಜೀವನ್ ಹಾಗೂ ಪಣಿಕ ಜನಾಂಗದ ಅರುಣ್ ಪೂವಯ್ಯ ಉಪಸ್ಥಿತರಿದ್ದರು.