ಮಡಿಕೇರಿ, ಮಾ. ೧೦: ಕೊಡಗು ಜಿಲ್ಲೆಯಲ್ಲಿ ೨೦೧೯ರಲ್ಲಿ ಸುರಿದ ಮಹಾ ಮಳೆಯಲ್ಲಿ, ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡಿದ್ದ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಟ್ಟದಕಾಡು, ನಲ್ವತ್ತೇಕರೆ ಹಾಗೂ ಕುಂಬಾರಗುAಡಿ ಗ್ರಾಮಗಳು ಜಲಾವೃತಗೊಂಡು ಬಡ ಕುಟುಂಬಗಳು ಸೂರು ಕಳೆದುಕೊಂಡಿತ್ತು.
ಸುಮಾರು ೪೦೦ಕ್ಕೂ ಹೆಚ್ಚು ಮನೆಗಳು ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಹಾನಿ ಗೊಂಡಿತ್ತು. ಇದರಲ್ಲಿ ೭೫ ಮನೆಗಳು ವಾಸಕ್ಕೆ ಯೋಗ್ಯವಲ್ಲದ ರೀತಿಯಲ್ಲಿ ಸಂಪೂರ್ಣ ಹಾನಿಗೊಂಡಿತ್ತು. ಮನೆ ಕಳೆದುಕೊಂಡವರಲ್ಲಿ ೫೦ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಸೂರು ಒದಗಿಸುವ ಕೆಲಸದಲ್ಲಿ ಜಮಾಅತ್ ಇಸ್ಲಾಮಿ ಹಿಂದ್ ಸಂಘಟನೆ ಮುಂದಾಗಿತ್ತು.
ಇದೀಗ ಕೇರಳದ ಪೀಪಲ್ಸ್ ಫೌಂಡೇಶನ್ ನೆರವಿನಿಂದ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ನಲ್ವತ್ತೇಕರೆಯಲ್ಲಿ ಮೊದಲ ಹಂತದಲ್ಲಿ ಸಂತ್ರಸ್ತರಿಗೆ ೨೫ ಮನೆಗಳ ವಿತರಣೆ ತಾ. ೧೩ ರಂದು ನಡೆಯಲಿದೆ. ಸಂತ್ರಸ್ತರಿಗೆ ನೀಡಲಾಗುತ್ತಿರುವ ಮನೆಗಳಿಗೆ "ಪೀಪಲ್ಸ್ ವಿಲೇಜ್" ಎಂದು ನಾಮಕರಣ ಮಾಡಲಾಗಿದೆ.
ಸೂರಿಲ್ಲದವರ ನೆರವಿಗೆ ನಿಂತ ಪೀಪಲ್ಸ್ ಫೌಂಡೇಶನ್
೨೦೧೯ ರಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಧಾರಕಾರ ಮಳೆಗೆ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹಕ್ಕೆ ಸಿಲುಕಿ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೪೦೦ಕ್ಕೂ ಹೆಚ್ಚು ಮನೆಗಳಿಗೆ ಕಾವೇರಿ ನದಿ ನೀರು ನುಗ್ಗಿ ಸಂಪೂರ್ಣವಾಗಿ ಹಾನಿಗೊಂಡಿತ್ತು.
೨೦೦ಕ್ಕೂ ಹೆಚ್ಚು ಮನೆಗಳಿಗೆ ಹಾನಿಗೊಂಡಿತ್ತು. ಒಂದೆಡೆ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದ ಸಂತ್ರಸ್ತರಿಗೆ ಸರ್ಕಾರ ಇದುವರೆಗೆ ಸೂರು ಒದಗಿಸಲು ಸಾಧ್ಯವಾಗಿಲ್ಲ.
ಏಕೆಂದರೆ, ಸಂತ್ರಸ್ತರಿಗೆ ಮನೆ ನಿರ್ಮಿಸಲು ಇದುವರೆಗೆ ಶಾಶ್ವತವಾದ ಜಾಗ ಸಿಕ್ಕಿಲ್ಲ ಎನ್ನುವ ಗೊಂದಲದಲ್ಲೇ ಜಿಲ್ಲಾಡಳಿತ ಇದೆ.
ಏತನ್ಮಧ್ಯೆ ಸೂರು ಕಳೆದುಕೊಂಡ ಸಂತ್ರಸ್ತರಿಗೆ ಕೇರಳ ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ, ನಿರಾಶ್ರಿತರಿಗೆ ಪುನರ್ವಸತಿ ಯೋಜನೆಯನ್ನು ಕಲ್ಪಿಸಿ ಕೊಡುತ್ತಿರುವ "ಪೀಪಲ್ಸ್ ಫೌಂಡೇಶನ್" ಸಂಸ್ಥೆ ಸೂರು ಕಳೆದುಕೊಂಡವರಿಗೆ ಸೂರು ಒದಗಿಸಿಕೊಟ್ಟಿದ್ದಾರೆ. ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಭಾಗದಲ್ಲಿ ಮನೆ ಕಳೆದುಕೊಂಡಿದ್ದ ೫೦ ಬಡ ನಿರಾಶ್ರಿತರನ್ನು ಗುರುತಿಸಿ ಅವರಿಗೆ ಮನೆ ನಿರ್ಮಿಸುವ ಕೆಲಸವನ್ನು ಪೀಪಲ್ಸ್ ಫೌಂಡೇಶನ್ ಮಾಡಿದ್ದು, ಮೊದಲ ಹಂತದಲ್ಲಿ ೨೫ ಮನೆಗಳು ವಿತರಣೆಗೆ ಸಿದ್ಧಗೊಂಡಿದ್ದು, ತಾ. ೧೩ ರಂದು ೨೫ ಕುಟುಂಬಗಳಿಗೆ ವಿತರಣೆಯಾಗಲಿದೆ.
೨ನೇ ಹಂತದಲ್ಲಿ ಮುಂದಿನ ದಿನಗಳಲ್ಲಿ ೨೫ ಮನೆಗಳು ವಿತರಣೆಯಾಗಲಿದೆ. ಬಾಡಿಗೆ ಮನೆ ಹಾಗೂ ಟೆಂಟ್ಗಳನ್ನು ನಿರ್ಮಿಸಿ ಜೀವನ ನಡೆಸುತ್ತಿದ್ದ ನಿರಾಶ್ರಿತರಿಗೆ "ಪೀಪಲ್ಸ್ ಫೌಂಡೇಶನ್, ಜಮಾಹತೇ ಇಸ್ಲಾಮಿ ಹಿಂದ್, ಎಚ್.ಆರ್.ಎಸ್ ಹಾಗೂ ಡಚ್ ಫೌಂಡೇಶನ್ ಸಂಸ್ಥೆ ಬೆಳಕಾಗಿದೆ.
ರೂ. ೧ ಕೋಟಿ ೩೦ ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ
ಮೊದಲ ಹಂತದಲ್ಲಿ ಜಮಾಅತ್ ಇಸ್ಲಾಮಿ ಹಿಂದ್ ಕೊಡಗು ಘಟಕ ಸರ್ವೆ ನಡೆಸಿ ಗುರುತಿಸಿರುವ ೨೫ ನಿರಾಶ್ರಿತರ ಕುಟುಂಬಗಳಿಗೆ ಮೊದಲ ಹಂತದಲ್ಲಿ ಮನೆ ವಿತರಣೆ ಯಾಗಲಿದೆ.
ಈಗಾಗಲೇ ಮನೆ ನಿರ್ಮಾಣದ ಕಾಮಗಾರಿ ಸಂಪೂರ್ಣ ಪೂರ್ಣ ಗೊಂಡಿದೆ. ಕೇರಳದ ಕ್ಯಾಲಿಕಟ್ ಡಚ್ ಫೌಂಡೇಶನ್, ಪ್ರಮುಖ ಹಾಗೂ ಅನಿವಾಸಿ ಭಾರತೀಯ ಜನಾಬ್ ಅಬ್ದುಲ್ಲಾ ಸಾಹೇಬ್ ಅವರು ೫೦ ಕುಟುಂಬಗಳಿಗೆ ಮನೆ ನಿರ್ಮಿಸಲು ನಲ್ವತ್ತೇಕರೆಯಲ್ಲಿ ರೂ. ೭೪ ಲಕ್ಷ ವೆಚ್ಚದಲ್ಲಿ ಎರಡು ಎಕರೆ ಜಾಗವನ್ನು ಖರೀದಿಸಿ, ನಿರಾಶ್ರಿತರಿಗೆ ಮನೆ ನಿರ್ಮಿಸಲು ಪೀಪಲ್ಸ್ ಫೌಂಡೇಶನ್ ಹಾಗೂ ಜಮಾಅತ್ ಇಸ್ಲಾಮಿ ಹಿಂದ್ ಕೊಡಗು ಘಟಕಕ್ಕೆ ಹಸ್ತಾಂತರಿಸಿದರು.
೨೫ ಮನೆ ನಿರ್ಮಾಣಕ್ಕೆ ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ಖರ್ಚಾಗಿದ್ದು, ಒಂದು ಮನೆಗೆ ತಲಾ ಕನಿಷ್ಟ ಆರು ಲಕ್ಷಕ್ಕೂ ಅಧಿಕ ರೂಪಾಯಿ ವೆಚ್ಚ ತಗುಲಿದೆ. ಅದಲ್ಲದೇ ಸಂತ್ರಸ್ತರಿಗೆ ೨ ರಿಂದ ಮೂರು ಸೆಂಟ್ ಜಾಗದಲ್ಲಿ ಮನೆ ನಿರ್ಮಾಣ ಮಾಡಿಕೊಡಲಾಗಿದೆ.
ತಾತ್ಕಾಲಿಕ ೭೫ ಟೆಂಟ್ಗಳ ನಿರ್ಮಾಣ
ಸಂಪೂರ್ಣ ಮನೆ ನಾಶ ವಾಗದ ಕುಟುಂಬಗಳಿಗೆ, ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯ ವಿಪತ್ತು ರಕ್ಷಣಾ ತಂಡವಾದ ಎಚ್.ಆರ್.ಎಸ್ ಸ್ವಯಂ ಸೇವಕರು ೭೫ ತಾತ್ಕಾಲಿಕ ಟೆಂಟ್ಗಳನ್ನು ನಿರ್ಮಿಸಿ, ಸಂತ್ರಸ್ತರಿಗೆ ಪುನರ್ವಸತಿ ವ್ಯವಸ್ಥೆ ಗಳನ್ನು ಕಲ್ಪಿಸಿಕೊಡಲಾಗಿತ್ತು.
ಅದಲ್ಲದೇ, ಸಿದ್ದಾಪುರದಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ಸಂಘಟನೆಯು ರಿಲೀಫ್ ಸೆಲ್ ಸ್ಥಾಪಿಸಿ, ನಿರಾಶ್ರಿತರ ಸಹಾಯಕ್ಕೆ ನಿಂತಿದ್ದರು.
ಸೂರು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಆಹಾರದ ಕಿಟ್ ವಿತರಿಸಿ, ತುರ್ತು ಪರಿಹಾರ ಕಾರ್ಯದಲ್ಲಿ ಎಚ್.ಆರ್.ಎಸ್ ತಂಡದ ಸದಸ್ಯರು ತೊಡಗಿ ಕೊಂಡಿದ್ದರು. ರಿಲೀಫ್ ಸೆಲ್ ಮುಖಾಂತರ ಸಂತ್ರಸ್ತರಿಗೆ ನಿತ್ಯೋಪಯೋಗಿ ವಸ್ತುಗಳನ್ನು ವಿತರಿಸಿದ್ದರು. ಸಂತ್ರಸ್ತರಿಗೆ ಆರೋಗ್ಯ ಶಿಬಿರವನ್ನು ಕೂಡ ಏರ್ಪಡಿಸಿ, ಸಂತ್ರಸ್ತರ ನೆರವಿಗೆ ನಿಂತಿದ್ದರು. ಸಂತ್ರಸ್ತರಿಗೆ ನೀಡಲಾಗುತ್ತಿರುವ ಮನೆಗಳಿಗೆ "ಪೀಪಲ್ಸ್ ವಿಲೇಜ್" ಎಂದು ನಾಮಕರಣ ಮಾಡಲಾಗಿದೆ ಎಂದು ಕೊಡಗು ಜಿಲ್ಲೆಯ ಜಮಾಅತೇ ಇಸ್ಲಾಮಿ ಹಿಂದ್ ಸಂಚಾಲಕ ಪಿ.ಕೆ. ಅಬ್ದುಲ್ ರಹಮಾನ್ ತಿಳಿಸಿದ್ದಾರೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ