ಗೋಣಿಕೊಪ್ಪಲು, ಮಾ. ೯: ಕೊಡಗಿನ ೨ ಕ್ಷೇತ್ರಗಳು ಹಾಗೂ ರಾಜ್ಯದಲ್ಲಿ ೧೫೦ ಸ್ಥಾನಗಳು ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವು ಸಾಧಿಸಲಿದೆ. ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಪೇಜ್ ಮಟ್ಟದ ಕಾರ್ಯಕರ್ತರು ಹಗಲಿರುಳು ದುಡಿಯುತ್ತಿದ್ದಾರೆ. ಅಭಿವೃದ್ಧಿಯ ಆಧಾರದಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ತಿಳಿಸಿದರು.
ಗೋಣಿಕೊಪ್ಪಲುವಿನ ಪರಿಮಳ ಮಂಗಳ ವಿಹಾರದಲ್ಲಿ ಜನಸಂಘದ ಪ್ರಮುಖರು, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದ ವರಿಷ್ಠರ ನಿರ್ದೇಶನದಂತೆ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಜನಸಂಘದ ಪ್ರಮುಖರ ಹಾಗೂ ಪಕ್ಷದ ಹಿರಿಯರ ಸಲಹೆಗಳನ್ನು ಪಡೆಯಲಾಗಿದೆ ಎಂದರು.
ಹಿರಿಯರ ಅನುಭವವನ್ನು ಪಕ್ಷವು ಬಳಕೆ ಮಾಡಿಕೊಳ್ಳಲಿದೆ. ಮುಂದಿನ ಚುನಾವಣೆಯನ್ನು ಪಕ್ಷವು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಕಾರ್ಯಕರ್ತರು ಯಾವುದೇ ಆಮಿಷಗಳಿಗೆ ಒಳಗಾಗದಂತೆ ನೋಡಿಕೊಳ್ಳಬೇಕು. ರಾಜ್ಯದ ಉದ್ದಗಲಕ್ಕೂ ನಡೆಸುತ್ತಿರುವ ವಿಜಯ ಸಂಕಲ್ಪ ಯಾತ್ರೆಯು ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಇದರಿಂದ ಪಕ್ಷದ ಮೇಲೆ ಹಾಗೂ ಬಿಜೆಪಿ ಸರ್ಕಾರದ ಆಡಳಿತ ಮೇಲೆ ಜನರು ಇಟ್ಟಿರುವ ವಿಶ್ವಾಸವೆ ಕಾರಣವಾಗಿದೆ. ಅಭಿವೃದ್ಧಿಯ ಆಧಾರದ ಮೇಲೆ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂದರು.
ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಪಕ್ಷವು ಸಂದರ್ಭಕ್ಕನುಗುಣವಾಗಿ Äನಿರ್ದೇಶನಗಳನ್ನು ನೀಡುವ ಸಂದರ್ಭ ಚಾಚೂ ತಪ್ಪದೆ ಪಾಲಿಸಬೇಕು ಎಂದರು.
ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಏಪ್ರಿಲ್ ತಿಂಗಳಿನಲ್ಲಿ ಪಕ್ಷ ಕೊಡಗಿನ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ. ಪಕ್ಷದ ವರಿಷ್ಠರು ಚುನಾವಣೆ ಸಿದ್ಧತೆಗೆ ಬೇಕಾದ ಎಲ್ಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ಜಾತಿಯ ವ್ಯವಸ್ಥೆ ಮೀರಿ ಪಕ್ಷ ಎಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ ಎಂದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿರುವ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಇದೆ. ಈ ಬುನಾದಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದರು. ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಭೀಮಯ್ಯ, ಶಿಸ್ತು ಸಮಿತಿಯ ಪ್ರಮುಖರಾದ ರೀನಾ ಪ್ರಕಾಶ್, ವೀರಾಜಪೇಟೆ ಮಂಡಲ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟಿರ ಪ್ರವೀಣ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಕೆ.ಬಿ. ಗಿರೀಶ್ ಗಣಪತಿ, ಗುಮ್ಮಟ್ಟಿರ ಕಿಲನ್ ಗಣಪತಿ, ಕುಪ್ಪಂಡ ಗಿರಿ ಪೂವಣ್ಣ, ಗುಮ್ಮಟ್ಟಿರ ದರ್ಶನ್, ಚೋಡುಮಾಡ ಶ್ಯಾಮ್, ಟಿಪ್ಪು ಬಿದ್ದಪ್ಪ, ಅಚ್ಚಪಂಡ ಮಹೇಶ್, ಲಾಲಾ ಭೀಮಯ್ಯ, ಸಿ.ಕೆ. ಬೋಪಣ್ಣ, ಶಶಿ ಸುಬ್ರಮಣಿ, ಬೊಟ್ಟಂಗಡ ರಾಜು, ಮಾಚಿಮಾಡ ರವೀಂದ್ರ, ಬೋಸ್ ದೇವಯ್ಯ, ಕಟ್ಟೆರ ಈಶ್ವರ್, ರಾಣಿ ನಾರಾಯಣ, ಚೆಕ್ಕೆರ ಸೂರ್ಯ, ಕಾಟಿಮಾಡ ಶರೀನ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಾರ್ಯಕರ್ತರ ಸೇವೆಯನ್ನು ಪರಿಗಣಿಸಿ ಹಲವು ಮಂದಿಯನ್ನು ಪಕ್ಷದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ವಾಟೇರಿರ ಬೋಪಣ್ಣ ಸ್ವಾಗತಿಸಿ, ಅಜ್ಜಿಕುಟ್ಟಿರ ಪ್ರವೀಣ್ ನಿರೂಪಿಸಿ, ವಿನು ಚಂಗಪ್ಪ ವಂದಿಸಿದರು.