ಅಣ್ಣೀರ ಹರೀಶ್ ಮಾದಪ್ಪ
ಶ್ರೀಮಂಗಲ, ಮಾ. ೯: ಮಾಜಿ ಸೈನಿಕರೋರ್ವರು ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡಿರುವ ಜಾಗವನ್ನು ಸರಕಾರದಿಂದ ತಮ್ಮ ಹೆಸರಿಗೆ ಮಂಜೂರು ಮಾಡಿಕೊಳ್ಳಲು ನಮೂನೆ ೫೦ ಮತ್ತು ೫೩ ರಲ್ಲಿ ಅರ್ಜಿ ಸಲ್ಲಿಸದಿದ್ದರೂ, ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಮಾಜಿ ಸೈನಿಕರ ಕೋಟಾದಡಿ ಅರ್ಜಿದಾರರಾದ ಮಾಜಿ ಸೈನಿಕರಿಗೆ ಮಂಜೂರು ಮಾಡಲು ಕರ್ನಾಟಕ ಸರಕಾರದ ಕಂದಾಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶಿಸಿದೆ.
ಜಿಲ್ಲೆಯ ಟಿ. ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದಲ್ಲಿ ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅವರು ಸರಕಾರದ ಆದೇಶದ ವಿರುದ್ಧ ಉಚ್ಚ ನ್ಯಾಯಾಲಯಕ್ಕೆ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರ ಮೂಲಕ ಸಲ್ಲಿಸಿದ್ದ ರಿಟ್ ಅರ್ಜಿ (ಪಿಟಿಷನ್ ಸಂಖ್ಯೆ. ೩೮೬೯೬/೨೦೧೪/(೦೫.೦೧.೨೦೨೩) ಕೆ.ಎಲ್.ಆರ್.) ವಿಚಾರಣೆ ನಡೆಸಿ ನ್ಯಾಯಮೂರ್ತಿ ಆರ್. ದೇವದಾಸ್ ಅವರು ತೀರ್ಪು ಪ್ರಕಟಿಸಿದ್ದಾರೆ.
ಈ ತೀರ್ಪಿನಲ್ಲಿ ನಮೂನೆ ೫೦ ಮತ್ತು ೫೩ ರಲ್ಲಿ ಮಾಜಿ ಸೈನಿಕರಾದ ಕಟ್ಟೇರ ವಿಶ್ವನಾಥ್ ಅವರು ಅರ್ಜಿ ಸಲ್ಲಿಸದಿದ್ದರೂ ಮಾಜಿ ಸೈನಿಕರ ಕೋಟಾ ಸಂವಿಧಾನದ ವಿಧಿ ೨೨೬ ಮತ್ತು ೨೨೭ ರಡಿಯಲ್ಲಿ ಅರ್ಜಿದಾರರಾದ ವಿಶ್ವನಾಥ್ ಅವರ ಹೆಸರಿಗೆ ೩ ತಿಂಗಳಲ್ಲಿ ಒತ್ತುವರಿ ಮಾಡಿಕೊಂಡಿರುವ ೫ ಎಕರೆ ಜಾಗವನ್ನು ಮಂಜೂರು ಮಾಡುವಂತೆ ಪ್ರತಿವಾದಿಗಳಾದ ರಾಜ್ಯ ಕಂದಾಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಅರ್ಜಿದಾರ ಕಟ್ಟೇರ ವಿಶ್ವನಾಥ್ ಅವರ ಸ್ವಾಧೀನದಲ್ಲಿ ಬೇರೆ ಜಾಗ ಇರುವುದರಿಂದ ಮತ್ತು ಒತ್ತುವರಿ ಜಾಗ ಮಂಜೂರಾತಿಗೆ ಸರಕಾರದ ಕಂದಾಯ ಇಲಾಖೆಯ ನಿಯಮದಂತೆ ನಮೂನೆ ೫೦ ಮತ್ತು ೫೩ ರಲ್ಲಿ ಅರ್ಜಿ ಸಲ್ಲಿಸದೇ ಇರುವುದರಿಂದ ವಿಶ್ವನಾಥ್ ಅವರ ಅರ್ಜಿ ಮಂಜೂರಾತಿಗೆ ಪರಿಗಣಿಸಲಾಗುವುದಿಲ್ಲ ಎಂದು ಜಾಗ ಮಂಜೂರಾತಿಗೆ ತಕರಾರು ಹಾಕಲಾಗಿತ್ತು. ಇದನ್ನು ಅರ್ಜಿದಾರರು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.