ಕುಶಾಲನಗರ, ಮಾ. ೯: ದಕ್ಷ, ಶಿಸ್ತು ಬದ್ಧ ಆಡಳಿತ ವರ್ಗ ಸಿಬ್ಬಂದಿಗಳ ಹಾಗೂ ಸದಸ್ಯರ ಸಹಕಾರದೊಂದಿಗೆ ಮಾತ್ರ ಸಹಕಾರ ಸಂಘದ ಅಭಿವೃದ್ಧಿ ಸಾಧ್ಯ ಎಂದು ಕೊಡಗು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಪಿ. ಬಾಂಡ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದ ಸಹಕಾರ ಕ್ಷೇತ್ರದಲ್ಲಿ ೨೫ ವರ್ಷಗಳಿಗೂ ಅಧಿಕ ಕಾಲ ಸುದೀರ್ಘ ಸೇವೆ ಸಲ್ಲಿಸುತ್ತಿರುವ ಹಿರಿಯ ಸಹಕಾರಿ ಟಿ.ಆರ್. ಶರವಣಕುಮಾರ್ ಅವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾರದರ್ಶಕ ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿ ಕುಶಾಲನಗರದಲ್ಲಿ ಎರಡು ಸಹಕಾರ ಸಂಸ್ಥೆಗಳನ್ನು ಉನ್ನತ ಸ್ಥಾನಕ್ಕೆ ತಂದಿರುವ ಶರವಣ ಕುಮಾರ್ ಅವರ ತಂಡದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಇಂತಹ ಸಂದರ್ಭ ರಾಜಕೀಯ ರಹಿತವಾಗಿ ವಿಚಾರ ಆಧಾರಿತವಾಗಿ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವ ಅಗತ್ಯತೆ ಇದೆ ಎಂದರು. ಕುಶಾಲನಗರ ಪಟ್ಟಣದಲ್ಲಿ ಸಹಕಾರ ಸಂಘದ ಸುಸಜ್ಜಿತ ಕಟ್ಟಡ ನಿರ್ಮಾಣ, ವಿವಿಧೋದ್ದೇಶ ಸಹಕಾರ ಸಂಘ ಮತ್ತು ಕೈಗಾರಿಕೋದ್ಯಮಿಗಳ ವೃತ್ತಿ ನಿರತರ ಸಂಘದ ಅತ್ಯಾಧುನಿಕ ತಂತ್ರಜ್ಞಾನದ ಕಟ್ಟಡ, ಸಮುದಾಯ ಭವನಕ್ಕೆ ಒಂದು ಎಕರೆ ನಿವೇಶನ, ಪಟ್ಟಣದಲ್ಲಿ ಬೆಲೆ ಬಾಳುವ ನಿವೇಶನ ಖರೀದಿ, ಇದರೊಂದಿಗೆ ಸುಮಾರು ೩೦೦ ಕೋಟಿ ವಾರ್ಷಿಕ ವಹಿವಾಟು ಇವುಗಳೆಲ್ಲ ಶರವಣಕುಮಾರ್ ಅವರ ನೇತೃತ್ವದ ತಂಡದ ಸಾಧನೆಗಳು ಎಂದು ಹೇಳಿದರು.
ಶರವಣ ಕುಮಾರ್ ಅವರ ಸಾಧನೆಗಳ ಬಗ್ಗೆ ಪ್ರಕಟಗೊಂಡ ಕಿರು ಹೊತ್ತಿಗೆಯನ್ನು
(ಮೊದಲ ಪುಟದಿಂದ) ಬಿಡುಗಡೆಗೊಳಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ಸಹಕಾರಿ ಕ್ಷೇತ್ರವನ್ನು ವೈಯಕ್ತಿಕ ಸ್ವತ್ತು ಎಂದು ಭಾವಿಸಿದಲ್ಲಿ ಅದು ಆತಂಕಕಾರಿ ಬೆಳವಣಿಗೆ ಆಗುತ್ತದೆ. ನಿಸ್ವಾರ್ಥ ಸೇವೆ ಮೂಲಕ ಸಾಧನೆ ಮಾಡಿದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು. ದಿವ್ಯ ಸಾನಿಧ್ಯ ವಹಿಸಿದ್ದ ಅರಮೇರಿ ಮಠಾಧೀಶರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು.
ಸಮಾಜ ಸೇವಕ ಡಾ. ಮಂಥರ್ ಗೌಡ, ಕುಶಾಲನಗರ ಪುರಸಭೆ ಅಧ್ಯಕ್ಷ ಜಯ ವರ್ಧನ್ ಸಹಕಾರ ಸಂಘದ ನಿವೃತ್ತ ನಿಬಂಧಕರಾದ ಎಸ್.ಎಂ. ಸಂತೋಷ್, ಉಪ ನಿರ್ದೇಶಕರಾದ ವಿಜಯಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವಿ.ಪಿ. ಶಶಿಧರ್, ನಿವೃತ್ತ ಶಿಕ್ಷಕರಾದ ಎಂ.ಎಚ್. ನಜೀರ್ ಅಹಮದ್ ಮಾತನಾಡಿ ಶರವಣ ಕುಮಾರ್ ಅವರ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ನಿರ್ದೇಶಕರು, ವಕೀಲರ ಸಂಘದ ಅಧ್ಯಕ್ಷರು ಆಗಿರುವ ಆರ್. ಕೆ ನಾಗೇಂದ್ರ ಬಾಬು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಈ ಸಂದರ್ಭ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ವಿ.ಎಸ್. ಆನಂದಕುಮಾರ್, ಕೈಗಾರಿಕೋದ್ಯಮಿ ಗಳ ಸಂಘದ ಹಾಗೂ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು ಗಳು ಅಧಿಕಾರಿಗಳು ಸಿಬ್ಬಂದಿಗಳು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.