ಸೋಮವಾರಪೇಟೆ, ಮಾ. ೭: ಬನವಾಸಿ ಕನ್ನಡಿಗ ಕನ್ನಡಮಯ ಟ್ರಸ್ಟಿನ ವತಿಯಿಂದ ನೀಡಲಾಗುವ ವಾರ್ಷಿಕ ಬನವಾಸಿ ಕನ್ನಡಿಗ ಪ್ರಶಸ್ತಿಗೆ ಸೋಮವಾರಪೇಟೆ ಪುಷ್ಪಗಿರಿ ಜೇಸೀ ಸಂಸ್ಥೆಯ ಅಧ್ಯಕ್ಷೆ ಹಾಗೂ ತಾಲೂಕು ಜಾನಪದ ಪರಿಷತ್‌ನ ಕಾರ್ಯದರ್ಶಿ ಯಾಗಿರುವ ಎಂ.ಎ. ರುಬೀನಾ ಆಯ್ಕೆಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಂಗಳೂರಿನ ನಾಗರಬಾವಿ ಯಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ನಡೆದ ಬನವಾಸಿ ಕನ್ನಡಿಗ ಕನ್ನಡಮಯ ಟ್ರಸ್ಟಿನ ೬ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಯುವ ಜನತೆಗೆ ಸ್ಪೂರ್ತಿದಾಯಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಧಕರನ್ನು ಗುರುತಿಸಿ ಬನವಾಸಿ ಕನ್ನಡಿಗ ೨೦೨೩ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸಾಧನೆಗಾಗಿ ಸೋಮವಾರಪೇಟೆಯ ಎಂ.ಎ. ರುಬೀನಾ ಅವರು ಬನವಾಸಿ ಕನ್ನಡಿಗ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭ ಚಲನಚಿತ್ರ ನಿರ್ದೇಶಕರಾದ ಟಿ.ಎಸ್. ನಾಗಾಭರಣ, ಎಸ್.ಮಹೇಂದರ್, ಬಿಗ್ ಬಾಸ್‌ನಲ್ಲಿದ್ದ ರೂಪೇಶ್ ರಾಜಣ್ಣ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಅಧ್ಯಕ್ಷ ಶಿವಕುಮಾರ್ ನಾಗರನವಿಲೆ, ಕೊಡಗು ತಂಡದ ಅಧ್ಯಕ್ಷ ನೌಷಾದ್ ಜನ್ನತ್ ಮತ್ತು ಬನವಾಸಿ ಕನ್ನಡಿಗ ಟ್ರಸ್ಟಿನ ಕಿರಣ್ ಮತ್ತು ಕಿರಣ್ ಮಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.