ಸೋಮವಾರಪೇಟೆ, ಮಾ. ೭: ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ತಾಲೂಕಿನ ಬೀಟಿಕಟ್ಟೆ ಸಮೀಪದ ಹಾರಳ್ಳಿ ಗ್ರಾಮದ ವಿದ್ಯಾರ್ಥಿಯೋರ್ವ ಸುರತ್ಕಲ್‌ನಲ್ಲಿ ನಡೆದ ಬೈಕ್ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ನಿನ್ನೆ ತಡರಾತ್ರಿ ನಡೆದಿದೆ.

ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಟಿಕಟ್ಟೆ-ಹಾರಳ್ಳಿ ಗ್ರಾಮದ ಕೃಷ್ಣ ಹಾಗೂ ಭಾಗ್ಯ ದಂಪತಿಯ ಪುತ್ರ, ಮಂಗಳೂರಿನ ಬಜ್ಪೆ ಕೆಂಜಾರು ಶ್ರೀದೇವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಶಾಂಕ್ (೨೧) ಮೃತ ದುರ್ದೈವಿ.

ನಿನ್ನೆ ರಾತ್ರಿ ಸ್ನೇಹಿತನೊಂದಿಗೆ ದ್ವಿಚಕ್ರ ವಾಹನದಲ್ಲಿ ಸುರತ್ಕಲ್ ಕಡೆಯಿಂದ ಮುಲ್ಕಿ ಕಡೆಗೆ ತೆರಳುತ್ತಿದ್ದ ಸಂದರ್ಭ ಸುರತ್ಕಲ್ ಟೋಲ್‌ಗೇಟ್ ಬಳಿ ಘಟನೆ ನಡೆದಿದೆ. ರಸ್ತೆಗೆ ಅಳವಡಿಸಿದ್ದ ರಸ್ತೆ ಉಬ್ಬು ಮೇಲೆ ಬೈಕ್ ತೆರಳಿದ ಸಂದರ್ಭ ಆಯತಪ್ಪಿ ಕೆಳ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ.

ಬೈಕ್ ಚಾಲಿಸುತ್ತಿದ್ದ ಸ್ನೇಹಿತ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಮೊದಲ ಪುಟದಿಂದ) ಘಟನೆಯ ಬಗ್ಗೆ ಮಾಹಿತಿ ಪಡೆದ ಮೃತನ ಸಂಬAಧಿಕರು ಮಂಗಳೂರಿಗೆ ತೆರಳಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ರಜೆಗಾಗಿ ಮನೆಗೆ ಆಗಮಿಸಿ ಕಳೆದ ತಿಂಗಳಷ್ಟೇ ಮಂಗಳೂರಿಗೆ ವಾಪಸ್ಸಾಗಿದ್ದ ಶಶಾಂಕ್, ಅಲ್ಲಿನ ಪಿ.ಜಿ.ಯೊಂದರಲ್ಲಿ ಉಳಿದುಕೊಂಡು ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ. ಮೃತ ಶಶಾಂಕ್ ಪೋಷಕರು ಸೇರಿದಂತೆ ಓರ್ವ ಸಹೋದರಿಯನ್ನು ಅಗಲಿದ್ದಾರೆ. ಸುರತ್ಕಲ್‌ನಲ್ಲಿ ಬೈಕ್ ಅಪಘಾತ : ಹಾರಳ್ಳಿಯ ವಿದ್ಯಾರ್ಥಿ ದುರ್ಮರಣ