ಮುಳ್ಳೂರು, ಮಾ. ೭: ಆಯುಷ್ ಇಲಾಖೆ ವತಿಯಿಂದ ಆಯುಷ್ ಇಲಾಖೆಯ ಸೇವಾ ಗ್ರಾಮ ಕಾರ್ಯಕ್ರಮದಡಿಯಲ್ಲಿ ಸಮೀಪದ ಮಾಲಂಬಿ ಗ್ರಾಮದ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳು, ಗಿರಿಜನ ಪೋಷಕರು ಮತ್ತು ಸಾರ್ವಜನಿಕರಿಗೆ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಸೋಮವಾರಪೇಟೆ ಸರಕಾರಿ ಆಯುಷ್ ಆಸ್ಪತ್ರೆಯ ಆಯುರ್ವೇದ ತಜ್ಞ ವೈದ್ಯಾಧಿಕಾರಿ ಡಾ. ಕೆ.ಎಸ್. ಶ್ವೇತಾ ಮಾಹಿತಿ ನೀಡಿ, ಜನರ ಆರೋಗ್ಯ ಹಿತದೃಷ್ಟಿಯಿಂದ ಆಯುಷ್ ಇಲಾಖೆಯು ಸೇವಾ ಗ್ರಾಮ ಕಾರ್ಯಕ್ರಮದ ಮೂಲಕ ಆಯುರ್ವೇದ ಪದ್ಧತಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವ ಜೊತೆಯಲ್ಲಿ ಉಚಿತವಾಗಿ ಆಯುರ್ವೇದ ಔಷಧಿ, ಮಾತ್ರೆಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಜನರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಯೋಜನೆಯನ್ನು ಸದುಪಯೋಗಿಸಿ ಕೊಳ್ಳುವಂತೆ ಮನವಿ ಮಾಡಿದರು.

ಡಾ. ಕೆ.ಎಸ್. ಶ್ವೇತಾ ಮತ್ತು ಸೋಮವಾರಪೇಟೆ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪಿ.ಜಿ. ಅರಣ್ ಆರೋಗ್ಯ ಶಿಬಿರದಲ್ಲಿ ರೋಗಿಗಳಿಗೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದರು. ಕಾರ್ಯಕ್ರಮದಲ್ಲಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಆನಂದ್, ಅಂಗನವಾಡಿ ಶಿಕ್ಷಕಿ ವೇದಕುಮಾರಿ, ಗ್ರಾ.ಪಂ. ಸದಸ್ಯೆ ಮುತ್ತಮ್ಮ, ಆಶ್ರಮ ಶಾಲೆಯ ಶಿಕ್ಷಕರು ಹಾಗೂ ಸರಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಆಸ್ಪತ್ರೆ ಸಿಬ್ಬಂದಿ ಪಾಲ್ಗೊಂಡಿದ್ದರು.