ಸೋಮವಾರಪೇಟೆ, ಮಾ. ೬: ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸರಕಾರಿ ಕಟ್ಟಡಗಳ ಗೋಡೆಯ ಮೇಲೆ ಬಿಜೆಪಿ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಭಿತ್ತಿ ಪತ್ರವನ್ನು ಅಂಟಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪದ ಹಿನ್ನೆಲೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ತೆರವುಗೊಳಿಸಿದರು.

ತಾಲೂಕಿನ ಬೇಳೂರು ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಶಾಲಾ ಕಟ್ಟಡ,ಅಂಗನವಾಡಿ ಕೇಂದ್ರ, ಸರಕಾರಿ ಸಮುದಾಯ ಭವನದ ಗೋಡೆಗಳ ಮೇಲೆ ಹಾಗೂ ಸರಕಾರಿ ಜಾಹೀರಾತುಗಳ ಮೇಲೆ ರಾಜಕೀಯ ಪಕ್ಷದ ಭಿತ್ತಿ ಪತ್ರವನ್ನು ಅಂಟಿಸಿರುವುದನ್ನು ವಿರೋಧಿಸಿ, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೆ.ಎ.ಯಾಕೂಬ್ ಮತ್ತಿತರರು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗೆ ದೂರು ನೀಡಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಇದು ಕಾನೂನು ವಿರೋಧಿ ಕೃತ್ಯವಾಗಿದ್ದು, ಸರ್ಕಾರಿ ಆಸ್ತಿಪಾಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಭಿತ್ತಿ ಪತ್ರ ಅಂಟಿಸಿರುವವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಯಾಕೂಬ್ ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್, ಭಿತ್ತಿ ಪತ್ರ ಅಂಟಿಸಲು ಯಾವುದೇ ಅನುಮತಿಯನ್ನು ಪಡೆದಿಲ್ಲ. ರಾತ್ರಿ ಬಂದು ಅಂಟಿಸಿದ್ದಾರೆ. ಇವರ ಮೇಲೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದರು.

ನAತರ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಸಿಬ್ಬಂದಿಗಳ ಮೂಲಕ ಭಿತ್ತಿ ಪತ್ರಗಳನ್ನು ತೆಗೆಸಿದರು. ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಜಿತ್, ಗ್ರಾಮಸ್ಥರಾದ ಸತೀಶ್ ಮತ್ತಿತರರು ಇದ್ದರು.