ವೀರಾಜಪೇಟೆ, ಮಾ. ೬: ಹಿರಿಯರ ದೂರದೃಷ್ಟಿಯಿಂದ ಕಟ್ಟಿ ಬೆಳೆಸಿದ ಸಹಕಾರಿ ಕ್ಷೇತ್ರ ಇಂದು ಸಕಲ ಸೌಲತ್ತು ಸೌಲಭ್ಯಗಳೊಂದಿಗೆ ರೈತರಿಗೆ ಉತ್ತಮ ಸಹಕಾರಿಯಾಗಿ ಮುನ್ನಡೆಯುತ್ತಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವೀರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪಟ್ಟಣ ಸಹಕಾರ ಬ್ಯಾಂಕಿನ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಸಹಕಾರ ಸಂಘಗಳಿಗೆ ತನ್ನದೆ ಅದ ಕೊಡುಗೆ ನೀಡುತ್ತಿದೆ. ದೇಶದಲ್ಲಿ ಏಕರೂಪ ಕಾನೂನು ಜಾರಿಯಲ್ಲಿದೆ. ಸಹಕಾರಿ ಕ್ಷೇತ್ರದಲ್ಲಿ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದ್ದು, ಆರಂಭದಲ್ಲಿ ಸ್ವಲ್ಪ ತೊಂದರೆ ಉಂಟಾದರು ಇಂದು ಸುಧಾರಿಸಿಕೊಂಡಿದೆ ಎಂದರು.
ಕೇಂದ್ರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ೧೧೭ ವರ್ಷದ ಇತಿಹಾಸ ಕೊಡಗಿನ ಸಹಕಾರಿ ಸಂಘಗಳಿಗಿದೆ. ೧೯೨೧ ರಲ್ಲಿ ರಾಜ್ಯದಲ್ಲಿ ಸಹಕಾರಿ ಸಂಘಗಳ ಉದಯವಾಯಿತು. ಹದಿನೈದು ದಿನದಲ್ಲಿ ಕೊಡಗಿನ ಶಾಂತಳ್ಳಿ ಹೋಬಳಿಯ ತಲ್ತೆರೆ ಶೆಟ್ಟಳ್ಳಿ ಎಂಬ ಕುಗ್ರಾಮದಲ್ಲಿ ಕೊಡಗಿನ ಪ್ರಥಮ ಸಹಕಾರಿ ಸಂಘ ಆರಂಭವಾಯಿತು. ಅದರ ಪ್ರತಿಫಲವಾಗಿ ೩೪೪ ವಿವಿಧ ರೀತಿಯ ಸಹಕಾರ ಸಂಘಗಳು ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಲವಾರು ಸಂಘಗಳು ಈಗ ನೂರರ ಸಂಭ್ರಮ ದಾಟಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷ ಕರ್ನಂಡ ರಘು ಸೋಮಯ್ಯ ಮಾತನಾಡಿ ಪಟ್ಟಣ ಸಹಕಾರ ಬ್ಯಾಂಕ್ ಆರ್ಬಿಐ ನ ನೀತಿ ನಿಯಮದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ೧೮೦ ಕೋಟಿ ವಾರ್ಷಿಕ ವಹಿವಾಟು ನಡೆಸಲಾಗುತ್ತದೆ. ನಮ್ಮಲ್ಲಿ ಇಟ್ಟಿರುವ ಠೇವಣಿಗೆ ಸರ್ಕಾರದ ಭದ್ರತೆ ಇದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕ ಹೊಟ್ಟೆಂಗಡ ರಮೇಶ್, ಕೋಲತಂಡ ಸುಬ್ರಮಣಿ ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕಾಂಡAಡ ಚರ್ಮಣ, ಕೊಡಗು ಜಿಲ್ಲಾ ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಎಂ.ಈ. ಮೋಹನ್, ವೀರಾಜಪೇಟೆ ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಎಸ್ ಮೋಹನ್, ಪಟ್ಟಣ ಸಹಕಾರ ಬ್ಯಾಂಕ್ನ ಸಲಹೆಗಾರ ಚಾರಿಮಂಡ ಪ್ರಕಾಶ್, ವ್ಯವಸ್ಥಾಪಕ ಸಿ.ಕೆ. ಪೂವಯ್ಯ, ಆಡಳಿತ ಮಂಡಳಿಯ ನಿರ್ದೇಶರುಗಳು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಸ್ಮರಣ ಸಂಚಿಕೆಯನ್ನು ಮುಖ್ಯ ಅತಿಥಿಗಳು ಬಿಡುಗಡೆಗೊಳಿಸಿದರು.
ಹಿರಿಯ ಸಹಕಾರಿಗಳಾದ ಕರ್ನಂಡ ಸೋಮಯ್ಯ ಮತ್ತು ಪದ್ಮಿನಿ ಸೋಮಯ್ಯ, ಕೋಲತಂಡ ಬೋಪಯ್ಯ. ಪಟ್ಟಣ ಸಹಕಾರ ಬ್ಯಾಂಕ್ನ ಸಲಹೆಗಾರ ಚಾರಿಮಂಡ ಪ್ರಕಾಶ್ ಮತ್ತು ರಮಾ ಪ್ರಕಾಶ್, ನಿವೃತ ಸಿಬ್ಬಂದಿಗಳಾದ ಪೂವಮ್ಮ, ವೆಂಕಪ್ಪ ಅವರುಗಳನ್ನು ಸನ್ಮಾನಿಸಲಾಯಿತು.
ಬ್ಯಾಂಕ್ನ ನವೀಕರಣಗೊಂಡ ಕೊಠಡಿಗಳನ್ನು ಶಾಸಕ ಕೆ.ಜಿ ಬೋಪಯ್ಯ ಹಾಗು ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಉದ್ಘಾಟಿಸಿದರು. ಬ್ಯಾಂಕ್ನ ನಿರ್ದೇಶಕರಾದ ಕೋಲತಂಡ ಬೋಪಯ್ಯ ಸ್ವಾಗತಿಸಿದರು. ಮಾದೇಟಿರ ಬೆಳ್ಯಪ್ಪ ಮತ್ತು ಮಾಳೇಟಿರ ಶ್ರೀನಿವಾಸ್ ನಿರೂಪಿಸಿದರು. ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕಿ ಕೆ. ಕಾವೇರಮ್ಮ ವಂದಿಸಿದರು