ಮಡಿಕೇರಿ, ಮಾ. ೬: ಉತ್ತಮ ಅರಣ್ಯ, ಸಾಕಷ್ಟು ಬಗೆಯ ಅಪರೂಪದ ಜೀವ ವೈವಿಧ್ಯ, ಜಲಚರಗಳು, ಅಮೂಲ್ಯ ಗಿಡಮೂಲಿಕೆ ಹೊಂದಿರುವ ಪ್ರದೇಶವನ್ನು ಸಂರಕ್ಷಿಸುವ ಸಲುವಾಗಿ ಕೂಟುಪೊಳೆ ಜಲ ಸಂಗ್ರಹಾಗಾರದ ಬಳಿ ಇರುವ ಅರಣ್ಯ ಪ್ರದೇಶವನ್ನು ‘ಓಂಕಾರೇಶ್ವರ ಜೀವವೈವಿಧ್ಯ ತಾಣ’ವಾಗಿ ಪರಿವರ್ತನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಉದ್ದಗಲಕ್ಕೂ ಸಾವಿರಾರು ಜೀವವೈವಿಧ್ಯ ಪ್ರದೇಶಗಳಿವೆ. ಅವುಗಳಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜಿನ ಮೂಲವಾಗಿರುವ ಕೆ.ನಿಡುಗಣೆ ಗ್ರಾಮದ ಕೂಟುಹೊಳೆ ಜಲ ಸಂಗ್ರಹಾಗಾರದ ಬಳಿಯ ಅರಣ್ಯ ಪ್ರದೇಶ ಕೂಡ ಒಂದು. ಇಲ್ಲಿನ ಸರ್ವೆ ನಂಬರ್ ೯/೧ರ ೨೭.೦೮ ಎಕರೆ ಪ್ರದೇಶದಲ್ಲಿ ಉತ್ತಮ ಅರಣ್ಯ, ಸಾಕಷ್ಟು ಬಗೆಯ ಅಪರೂಪದ ಜೀವ ವೈವಿಧ್ಯ, ಜಲಚರಗಳು, ಅಮೂಲ್ಯ ಗಿಡ ಮೂಲಿಕೆಗಳಿವೆ. ಈ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗ ದಂತೆ ನೋಡಿಕೊಂಡು ರಕ್ಷಣೆ ಮಾಡುವ ಜೊತೆಗೆ ಸಂರಕ್ಷಣೆಗೆ ಪೂರಕವಾಗಿ ಅಭಿವೃದ್ಧಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಹಕಾರ ದೊಂದಿಗೆ ಕರ್ನಾಟಕ ಜೀವವೈವಿಧ್ಯ ಮಂಡಳಿ ಕಾರ್ಯಕ್ರಮ ರೂಪಿಸಲು ಮುಂದಾಗಿದೆ ಎಂದು ವಿವರಿಸಿದ್ದಾರೆ.
ಈ ವಿಚಾರವನ್ನು ಮಂಡಳಿಯ ಸಭೆಯಲ್ಲಿ
(ಮೊದಲ ಪುಟದಿಂದ) ಪ್ರಸ್ತಾಪಿಸಲಾಗಿತ್ತು. ಅದರ ಫಲಿತಾಂಶವಾಗಿ ಈ ಸ್ಥಳವನ್ನು ‘ಓಂಕಾರೇಶ್ವರ ಜೀವವೈವಿಧ್ಯ ರಕ್ಷಿತ ತಾಣ’ ಎಂಬುದಾಗಿ ಘೋಷಿಸಲು ಕ್ರಮಕೈಗೊಳ್ಳಲು ಸಭೆ ತೀರ್ಮಾನಿಸಿದೆ. ಸದ್ಯ ಮಡಿಕೇರಿ ನಗರ ತನ್ನ ವ್ಯಾಪ್ತಿಯನ್ನು ವರ್ಷದಿಂದ ವರ್ಷಕ್ಕೆ ವಿಸ್ತರಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ನಗರೀಕರಣ ಮತ್ತಷ್ಟು ವಿಸ್ತರಣೆಯಾದಾಗ ಈ ಅತ್ಯಮೂಲ್ಯ ಪ್ರದೇಶಕ್ಕೆ ಯಾವುದೇ ರೀತಿಯ ಧಕ್ಕೆಯಾಗಬಾರದೆಂಬ ದೂರಾಲೋಚನೆಯನ್ನೂ ಮಂಡಳಿ ಹೊಂದಿದೆ. ಶಾಸಕರ ಮಾರ್ಗದರ್ಶನದೊಂದಿಗೆ ಕೊಡಗು ಜಿಲ್ಲಾಡಳಿತದ ಜೊತೆ ಸೇರಿಕೊಂಡು ಮುಂದಿನ ದಿನದಲ್ಲಿ ವಿಶೇಷ ಜೀವ ವೈವಿಧ್ಯ ಸಂಪತ್ತಿನ ಆಗರವಾಗಿರುವ ಈ ಜಾಗದ ಸಂರಕ್ಷಣೆಗೆ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದೆಂದು ರವಿಕಾಳಪ್ಪ ತಿಳಿಸಿದ್ದಾರೆ.
ಕಾಡುಹಣ್ಣಿನ ಕುರಿತು ಅಧ್ಯಯನ
ಬದಲಾಗುತ್ತಿರುವ ದಿನಮಾನದಲ್ಲಿ ಕಾಡು ಹಣ್ಣುಗಳ ಬಗೆಗಿದ್ದ ಆಸಕ್ತಿ ಇಂದಿನ ತಲೆಮಾರಿನಲ್ಲಿ ಕಾಣುತ್ತಿಲ್ಲ. ಕೊಡಗಿನಲ್ಲಿ ಸಿಗುತ್ತಿದ್ದ ಅದೆಷ್ಟೋ ಬಗೆಯ ಕಾಡು ಹಣ್ಣುಗಳು ಇಂದು ಅಳಿವಿನಂಚಿಗೆ ಬಂದು ನಿಂತಿದೆ. ಅವುಗಳನ್ನು ಸಂರಕ್ಷಣೆ ಮಾಡುವ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಸಿ ಪೋಷಿಸುವ ಅನಿವಾರ್ಯತೆ ಇರುವ ಹಿನ್ನೆಲೆ ಅಧ್ಯಯನ ಮಾಡಲು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.
ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಡಾ. ಸತೀಶ್ ಅವರಿಗೆ ಜವಾಬ್ದಾರಿ ವಹಿಸಲಾಗಿದ್ದು, ಅವರು ಕಾರ್ಯವನ್ನು ಕೈಗೆತ್ತಿಕೊಂಡು ಈಗಾಗಲೇ ಅಧ್ಯಯನ ನಡೆಸಿದ್ದಾರೆ. ಇವರಿಗೆ ಕರ್ನಾಟಕ ಜೀವ ವೈವಿಧ್ಯ ಮಂಡಳಿಯಿAದ ಪ್ರೋತ್ಸಾಹ ನೀಡಲಾಗಿದೆ. ಅನೇಕ ಬಗೆಯ ಕಾಡು ಹಣ್ಣುಗಳನ್ನು ಬೆಳೆಯಲು ಇವರು ಸಸಿ ಮಡಿಗಳನ್ನು ಸಹ ಮಾಡಿ, ರೈತರಿಗೆ ವಿತರಿಸುವ ಕಾರ್ಯವನ್ನೂ ಮಾಡುತ್ತಿದ್ದಾರೆ. ಹಣ್ಣಿನಲ್ಲಿರುವ ಗುಣಲಕ್ಷಣಗಳು, ಔಷಧೀಯ ಗುಣಗಳು ಹಾಗೂ ಅವುಗಳಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆಯೂ ಅಧ್ಯಯನ ಮಾಡಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇವರು ಮಾಡಿರುವ ಅಧ್ಯಯನದ ಲಾಭವನ್ನು ಜಿಲ್ಲೆಯ ರೈತರು ಪಡೆದುಕೊಂಡು, ಕೊಡಗಿನಲ್ಲಿ ಮರೆಯಾಗುತ್ತಿರುವ ಅಪರೂಪದ ಕಾಡುಹಣ್ಣುಗಳನ್ನು ಬೆಳೆದು ಸಂರಕ್ಷಿಸಲು ಆಸಕ್ತಿ ವಹಿಸಬೇಕಾಗಿ ರವಿಕಾಳಪ್ಪ ಮನವಿ ಮಾಡಿದ್ದಾರೆ.