ಮಡಿಕೇರಿ, ಮಾ. ೫: ಪ್ರಸ್ತುತ ವರ್ಷದ ಬಜೆಟ್ನಲ್ಲಿ ಸರ್ಕಾರ ವಿಶೇಷಚೇತನರನ್ನು ಕಡೆಗಣಿಸಿದೆ ಎಂದು ಜಿಲ್ಲಾ ವಿಶೇಷಚೇತನರ ಸಂಘದ ನಿರ್ದೇಶಕಿ ಎಂ.ಎನ್. ವೀಣಾ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಚುನಾವಣೆಗೂ ಮುನ್ನ ವಿಶೇಷಚೇತನರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದರು. ಸರ್ಕಾರದ ಸಾಧನೆಯನ್ನು ಮನೆ ಮನೆಗೆ ತಲುಪಿಸುವ ಸಲುವಾಗಿ ಕಳೆದ ಐದು ವರ್ಷಗಳ ಹಿಂದೆ ಗೌರವಧನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಆರ್. ಡಬ್ಲೂö್ಯ ಕಾರ್ಯಕರ್ತರು ವಿಶೇಷಚೇತನರನ್ನು ಮತಗಟ್ಟೆಗೆ ಕರೆತರಲು ಶ್ರಮವಹಿಸಿದ್ದಾರೆ.
ಆದರೆ, ಸರ್ಕಾರ ಕಾರ್ಯಕರ್ತ ರನ್ನು ಮರೆತಿದೆ. ಮತಗಟ್ಟೆಗೆ ಕರೆತಂದ ವಾಹನದ ಬಾಡಿಗೆಯನ್ನು ಪಾವತಿಸದೆ ತಮ್ಮ ಜವಾಬ್ದಾರಿಯನ್ನು ಮರೆತುಬಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣೆಗೆ ಮುಂಚಿತವಾಗಿ ವಿಶೇಷಚೇತನರ ಮಾಸಿಕ ಪೋಷಣಾ ಭತ್ಯೆಯನ್ನು ೩ ಸಾವಿರ ರೂ.ಗೆ ಹೆಚ್ಚಿಸಬೇಕು. ಗೌರವಧನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮೀಣ, ಪಟ್ಟಣ, ತಾಲೂಕು, ಪುನರ್ವಸತಿ ಕಾರ್ಯಕರ್ತರನ್ನು ಕ್ರಮವಾಗಿ ಗ್ರಾ.ಪಂ., ನಗರ, ತಾಲೂಕು ವಿಶೇಷಚೇತನರ ಅಧಿಕಾರಿಯಾಗಿ ಪರಿವರ್ತಿಸಬೇಕು. ಗೌರವಧನವನ್ನು ಕನಿಷ್ಟ ವೇತನವಾಗಿ ಪರಿವರ್ತಿಸಬೇಕು.
ಲೈನ್ಮನೆಯಲ್ಲಿ ವಾಸಿಸುತ್ತಿರುವ ವಿಶೇಷಚೇತನರ ಕುಟುಂಬಗಳಿಗೆ ವಿಶೇಷ ಆದ್ಯತೆ ಮೇಲೆ ಮನೆ ಒದಗಿಸಬೇಕು. ರಾಜ್ಯಾದ್ಯಂತ ಸರ್ಕಾರಿ ಬಸ್ಗಳಲ್ಲಿ ಸಂಚರಿಸಲು ಉಚಿತ ಪಾಸ್ ನೀಡಬೇಕೆಂದು ಒತಾಯಿಸಿದರು.
ಸಂಘದ ಅಧ್ಯಕ್ಷ ಜೆ.ಎ. ಮಹೇಶ್ವರ ಮಾತನಾಡಿ, ನಗರಸಭಾ ಆವರಣದಲ್ಲಿರುವ ಹಳೆಯ ಕಟ್ಟಡವನ್ನು ಸಂಬAಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿ ಪಡೆದುಕೊಂಡು ಸಂಘದ ಚಟುವಟಿಕೆಯನ್ನು ನಡೆಸುತ್ತಾ ಬಂದಿದ್ದೇವೆ. ಆದರೆ, ಸಂಘಕ್ಕೆ ವಂಚಿಸಿ, ಹೊರ ಉಳಿದಿದ್ದ ವ್ಯಕ್ತಿಯೊಬ್ಬರು ಕೆಲವರನ್ನು ಸೇರಿಸಿಕೊಂಡು ವಿಶೇಷಚೇತನರ ಒಕ್ಕೂಟ ರಚಿಸಿಕೊಂಡಿದ್ದಾರೆ. ಸಂಘದ ಕಚೇರಿಗೆ ಬೀಗ ಹಾಕಿ ಸಂಘದ ಕಾರ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನಿರ್ದೇಶಕರಾದ ಕೆ.ಪಿ. ರೇವಣ್ಣ, ಎಂ.ಕೆ. ಬಾಷ, ವಿಶೇಷಚೇತನರ ಸಹಕಾರ ಸಂಘದ ಅಧ್ಯಕ್ಷ ಬಿ.ಎಂ. ತಿರುಮಲ್ಲೇಶ್ವರ ಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಹಸನ್ ಉಪಸ್ಥಿತರಿದ್ದರು.