ಮಡಿಕೇರಿ, ಮಾ. ೫: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಹಾಗೂ ಉಪಾಧ್ಯಕ್ಷೆ ಸವಿತಾ ರಾಕೇಶ್ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಳ್ಳುವುದರ ಜೊತೆಗೆ, ಕೆಲವು ವಿಚಾರಕ್ಕೆ ಆಡಳಿತ ಪಕ್ಷದ ಸದಸ್ಯರೇ ವಿರೋಧಿಸಿದ್ದು ಅಚ್ಚರಿಮೂಡಿಸಿದೆ.

ನನ್ನ ವಾರ್ಡ್ನ ಕೆಲಸಕ್ಕೆ ಉಪಾಧ್ಯಕ್ಷರು ಈಚೆಗೆ ಜೆಸಿಬಿ ಕಳುಹಿಸಿ ಕೊಟ್ಟಿದ್ದರು. ಅದನ್ನು ಅಧ್ಯಕ್ಷರು ವಾಪಸ್ ಕರೆಸಿಕೊಂಡರು ಎಂದು ಎಸ್‌ಡಿಪಿಐ ಸದಸ್ಯ ಅಮೀನ್ ಮೊಹಿಸಿನ್ ಅವರು ಪ್ರಸ್ತಾಪಿಸಿದರು.

ಇದನ್ನು ನಿರಾಕರಿಸಿದ ಅನಿತಾ ಪೂವಯ್ಯ ಅವರಿಗೆ ಪ್ರತಿಕ್ರಿಯಿಸಿದ ಸವಿತಾ ರಾಕೇಶ್, ‘ಅಧ್ಯಕ್ಷರು ಹೇಳಿದ್ದರಿಂದಲೇ ಜೆಸಿಬಿಯನ್ನು ವಾಪಸ್ ಕರೆಸಲಾಗಿದೆ’ ಎಂದು ಹೇಳುವ ಮೂಲಕ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಧ್ಯೆ ಪ್ರವೇಶಿಸಿದ ಬಿಜೆಪಿ ಸದಸ್ಯ ಕೆ.ಎಸ್. ರಮೇಶ್, ‘ಒಂದು ಜೆಸಿಬಿ ಕರೆಸುವುದಕ್ಕೂ ಅಧ್ಯಕ್ಷರ ಅನುಮತಿ ಬೇಕು ಎನ್ನುವುದು ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಅನಿತಾ ಪೂವಯ್ಯ ಮಾತನಾಡಿ, ‘ಹಿಂದೆ ನಗರಸಭೆಯ ಜೆಸಿಬಿಯಿಂದ ಅನಧಿಕೃತವಾಗಿ ಕೆಲಸ ಮಾಡಲಾಗಿತ್ತು. ಅದಕ್ಕಾಗಿ ನನ್ನ ಗಮನಕ್ಕೆ ತರಬೇಕು ಎಂದು ಹೇಳುತ್ತಿದ್ದೇನೆ’ ಹೊರತು ಬೇರೆ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಆಡಳಿತ ಪಕ್ಷದ ಸದಸ್ಯರಿಂದಲೇ ತರಾಟೆ: ಸ್ಟೋನ್‌ಹಿಲ್‌ನಲ್ಲಿರುವ ತ್ಯಾಜ್ಯ ವಿಲೇವಾರಿ, ಗಾಂಧಿ ಮೈದಾನವನ್ನು ಬಾಡಿಗೆಗೆ ನೀಡಿರುವ ವಿಚಾರ, ಮಾಂಸ ಮಾರುಕಟ್ಟೆಯ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಆಡಳಿತ ಪಕ್ಷದ ಸದಸ್ಯರೇ ಪ್ರಸ್ತಾಪಿಸಿ ಅಧ್ಯಕ್ಷರ ಜೊತೆ ವಾಗ್ವಾದ ನಡೆಸಿದರು.

ಸ್ಟೋನ್‌ಹಿಲ್‌ನಲ್ಲಿರುವ ತ್ಯಾಜ್ಯ ವಿಲೇವಾರಿ ಕುರಿತು ಟೆಂಡರ್ ಪ್ರಕ್ರಿಯೆ ಇನ್ನೂ ನಡೆದಿಲ್ಲ ಎಂದು ಬಿಜೆಪಿ ಸದಸ್ಯ ಕಾಳಚಂಡ ಅಪ್ಪಣ್ಣ ಅತೃಪ್ತಿ ವ್ಯಕ್ತಪಡಿಸಿದರೆ, ಗಾಂಧಿ ಮೈದಾನವನ್ನು ವಾಣಿಜ್ಯ ಉದ್ದೇಶಕ್ಕೆ ಬಾಡಿಗೆಗೆ ನೀಡುವ ವಿಚಾರವನ್ನು ಸದಸ್ಯರ ಗಮನಕ್ಕೆ ತಂದಿಲ್ಲ ಎಂದು ಕೆ.ಎಸ್. ರಮೇಶ್ ಹಾಗೂ ಇನ್ನಿತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಗಾಂಧಿ ಮೈದಾನ ಬಾಡಿಗೆಗೆ ನೀಡಿರುವುದರಿಂದ ನಿತ್ಯ ರೂ. ೧೦ ಸಾವಿರ ಆದಾಯ ಬರುತ್ತಿದೆ ಎಂದು ಆಯುಕ್ತ ವಿಜಯ ಉತ್ತರಿಸಿದರು. ‘ಇನ್ನು ಮುಂದೆ ದೀರ್ಘ ಅವಧಿಗೆ ಬಾಡಿಗೆಗೆ ಕೊಡುವಾಗ ಕೌನ್ಸಿಲ್ ಗಮನಕ್ಕೆ ತರಬೇಕು’ ಎಂದು ಸದಸ್ಯರು ಆಗ್ರಹಿಸಿದರು.

ಉಳಿದಂತೆ, ಪ್ರತಿಬಾರಿಯಂತೆ ಈ ಬಾರಿಯೂ ರಾಜಕಾಲವೆ ಒತ್ತುವರಿ ಸಮಸ್ಯೆ ಮತ್ತೊಮ್ಮೆ ಪ್ರತಿಧ್ವನಿಸಿತು. ಯಾವುದೇ ಸ್ಪಷ್ಟ ನಿರ್ಣಯ ಇಲ್ಲದೆ ಅದು ಹಾಗೆಯೇ ಉಳಿಯಿತು.

ಸಭೆ ಆರಂಭವಾಗುವುದಕ್ಕೂ ಮೊದಲು ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಬೇಕಿತ್ತು. ಆದರೆ, ಸಭೆ ಆರಂಭವಾಗಿ ಎಸ್‌ಡಿಪಿಐ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ವಾದಗಳು ನಡೆದ ನಂತರ ಟಿ.ಜಾನ್ ಸೇರಿದಂತೆ ಈಚೆಗೆ ನಿಧನ ಹೊಂದಿದ ಗಣ್ಯರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಿತು.

ಸಭೆಯ ಆರಂಭದಲ್ಲೇ ನಿವೇಶನ ರಹಿತರ ವಿಷಯ ಪ್ರಸ್ತಾಪಿಸಿದ ಎಸ್‌ಡಿಪಿಐ ಸದಸ್ಯ ಅಮಿನ್ ಮೊಹಿಸಿನ್, ‘ಕಳೆದ ಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯ ಅಂಶಗಳು ಸಭೆಯ ನಡಾವಳಿಯಲ್ಲಿ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಪಕ್ಷ ಮತ್ತು ಎಸ್‌ಡಿಪಿಐ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಅಂತಿಮವಾಗಿ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.