ಗೋಣಿಕೊಪ್ಪಲು, ಮಾ. ೫: ಮುಂದಿನ ವಿಧಾನ ಸಭಾ ಚುನಾವಣೆ ಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದು ಸೂರ್ಯ, ಚಂದ್ರರಷ್ಟೆ ಸತ್ಯವೆಂದು ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ರಾಜ್ಯ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

ಚನ್ನಯ್ಯನಕೋಟೆಯ ರೋಚಸ್ ಸಭಾಂಗಣದಲ್ಲಿ ಆಯೋಜನೆ ಗೊಂಡಿದ್ದ ವೀರಾಜಪೇಟೆ ಮಂಡಲ ಓಬಿಸಿ ಮೋರ್ಚಾದ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಇವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲವು ಶತಸಿದ್ಧ. ಕೊಡಗಿನಲ್ಲಿ ಅಭಿವೃದ್ಧಿಗೆ ಕೊರತೆಯಿಲ್ಲ. ಆ ನಿಟ್ಟಿನಲ್ಲಿ ಶಾಸಕರು ಶ್ರಮವಹಿಸಿದ್ದಾರೆ ಎಂದರು. ಮಡಿಕೇರಿ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಮಾತನಾಡಿ ಚುನಾವಣೆ ಸಮೀಪಿಸುತ್ತಿದೆ. ಬಿಜೆಪಿಯ ಕಾರ್ಯಕರ್ತರು ಇನ್ನಷ್ಟು ಶ್ರಮಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ವೀರಾಜಪೇಟೆ ಕ್ಷೇತ್ರದ ಚುನಾವಣಾ ಉಸ್ತುವಾರಿ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ದೇಶದಲ್ಲಿ ಬದಲಾವಣೆ ಬಂದಿದೆ. ದೇಶದ ಪ್ರಧಾನಿ

(ಮೊದಲ ಪುಟದಿಂದ) ನರೇಂದ್ರ ಮೋದಿಯವರ ಅವಿರತ ಶ್ರಮ ಭಾರತದಲ್ಲಿ ಬದಲಾವಣೆ ಬರಲು ಕಾರಣವಾಗಿದೆ. ಕರ್ನಾಟಕದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ವಿವಿಧ ಮೋರ್ಚಾಗಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.

ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಬಿಜೆಪಿ ಪಕ್ಷ ಕೊಡಗಿನಲ್ಲಿ ಗಟ್ಟಿಯಾಗಿ ಬೆಳೆದಿದೆ. ಇದಕ್ಕೆ ಪಕ್ಷದ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಅಪಾರ ಕಾರ್ಯಕರ್ತರೇ ಸಾಕ್ಷಿ, ಮುಂದಿನ ಚುನಾವಣೆಯಲ್ಲಿ ಅಭಿವೃದ್ಧಿಯ ಆಧಾರದಲ್ಲಿ ಜನರು ಮತ ನೀಡಲಿ ದ್ದಾರೆ. ಅದರಲ್ಲಿ ಸಂಶಯವಿಲ್ಲ ಎಂದು ಆಶಾಭಾವನೆ ವ್ಯಕ್ತಪಡಿಸಿ ದರು. ಕರ್ನಾಟಕದಲ್ಲಿ ೧೫೦ ಸ್ಥಾನ ಗೆಲ್ಲಲಿದ್ದೇವೆ ಎಂದು ನುಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬೀನ್ ದೇವಯ್ಯ, ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷರಾದ ನೆಲ್ಲಿರ ಚಲನ್ ಕುಮಾರ್ ಮಾತನಾಡಿದರು.

ಓಬಿಸಿ ಮೋರ್ಚಾದ ಅಧ್ಯಕ್ಷ ಕೆ.ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ರೀನಾ ಪ್ರಕಾಶ್, ಅರುಣ್ ಭೀಮಯ್ಯ, ಓಬಿಸಿ ಮೋರ್ಚಾದ ವಿ.ಕೆ. ಲೋಕೇಶ್, ಗಣೇಶ್, ವಿನೋದ್ ಪೂಜಾರಿ, ನವೀನ್ ಅಪ್ರು, ವಿನುಕುಮಾರ್, ಅಜಿತ್ ಕರುಂಬಯ್ಯ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಗಿರೀಶ್ ಗಣಪತಿ, ವಿಜು ಸುಬ್ರಮಣಿ, ಶಶಿ ಸುಬ್ರಮಣಿ, ಗುಮ್ಮಟೀರ ಕಿಲನ್ ಗಣಪತಿ, ಗುಮ್ಮಟೀರ ದರ್ಶನ್, ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು. ಓಬಿಸಿ ಮೋರ್ಚಾದ ತಾಲ್ಲೂಕು ಉಪಾಧ್ಯಕ್ಷ ಬಿ.ಎನ್.ಪ್ರಕಾಶ್ ಸ್ವಾಗತಿಸಿ, ಇಂದಿರಾ ಮುರುಗೇಶ್ ನಿರೂಪಿಸಿ, ಉಸ್ತುವಾರಿ ಅಜಿತ್ ಕರುಂಬಯ್ಯ ವಂದಿಸಿದರು.

ಚನ್ನಯ್ಯನಕೋಟೆಯ ಅಯ್ಯಪ್ಪ ದೇವಾಲಯದಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮೆರವಣಿಗೆಯಲ್ಲಿ ಸಾಗಿ ಬಂದರು. ಚುನಾಯಿತ ಜನಪ್ರತಿನಿಧಿ ಗಳನ್ನು ಸಚಿವರು ಹಾಗೂ ಶಾಸಕರು ಸನ್ಮಾನಿಸಿ ಗೌರವಿಸಿದರು. ಬಿಜೆಪಿ ಯುವಕರು ಗೋಣಿಕೊಪ್ಪದಿಂದ ಚನ್ನಯ್ಯನಕೋಟೆಯವರೆಗೆ ಬೈಕ್ ಜಾಥದಲ್ಲಿ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು.- ಹೆಚ್.ಕೆ.ಜಗದೀಶ್