ಮಡಿಕೇರಿ, ಮಾ.೫: ದಿಢೀರ್ ಕಾಡ್ಗಿಚ್ಚು ಮೊಣ್ಣಂಗೇರಿ ಗ್ರಾಮದಲ್ಲಿ ವ್ಯಾಪಿಸುತ್ತಿದೆ. ೨೦೧೮ ಮತ್ತು ೧೯ ರ ಅವಧಿಯಲ್ಲಿ ಭಾರೀ ಪ್ರವಾಹ ಮತ್ತು ಭೂ ಕುಸಿತದಿಂದ ಜನರು ತೀವ್ರವಾಗಿ ತೊಂದರೆಗೀಡಾದ ಸ್ಥಳವಾದ ಎರಡನೇ ಮೊಣ್ಣಂಗೇರಿ ಗ್ರಾಮದಿಂದ ಬೆಂಕಿ ಪ್ರಾರಂಭವಾಯಿತು.
ಮೊಣ್ಣಂಗೇರಿಯ ಇಡೀ ಗುಡ್ಡಗಾಡು ಪ್ರದೇಶದಲ್ಲಿ ಇದೀಗ ಕಾಡ್ಗಿಚ್ಚು ಆವರಿಸಿದ್ದು, ಮೊದಲ ಮೊಣ್ಣಂಗೇರಿ ಕಡೆಗೆ ವ್ಯಾಪಿಸುತ್ತಿದೆ. ಬೆಂಕಿ ನಂದಿಸದಿದ್ದಲ್ಲಿ ಮಡಿಕೇರಿ ಸಮೀಪದ ಗಾಳಿಬೀಡು ಕಡೆಗೆ ವ್ಯಾಪಿಸುತ್ತದೆ. ಸಮೀಪದ ಮದೆನಾಡು ಗ್ರಾಮದ ನಿವಾಸಿ ಪತ್ರಕರ್ತ ಇಬ್ರಾಹಿಂ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದಾಗ ಆ ಪ್ರದೇಶ ತಮ್ಮ ವ್ಯಾಪ್ತಿಗೆ ಬಾರದ ಕಾರಣ ಕಾರ್ಯಾಚರಣೆ ನಡೆಸಲು ಹಿಂದೇಟು ಹಾಕಿದರು. ಇದೀಗ ಅರಣ್ಯ ಇಲಾಖೆ ಬೆಂಕಿ ನಂದಿಸಲು ಕ್ರಮ ಕೈಗೊಂಡಿದೆ. ಆದರೂ, ಈ ಪ್ರದೇಶಗಳು ಅರಣ್ಯ ಇಲಾಖೆಗೆ ಹಸಾಂತರಗೊಳ್ಳದ ಕಾರಣ ಕಾರ್ಯಾಚರಣೆಗೆ ತಾಂತ್ರಿಕ ಹಾಗೂ ಕಾನೂನಾತ್ಮಕ ತೊಡ ಕುಂಟಾಗುತ್ತಿದೆ ಎಂದು ಸಿಸಿಎಫ್ 'ಶಕ್ತಿ'ಗೆ ತಿಳಿಸಿದ್ದಾರೆ.
(ಮೊದಲ ಪುಟದಿಂದ) ಈ ಬಗ್ಗೆ ಚರ್ಚಿಸಿ ತೊಡಕು ನಿವಾರಿಸುವುದಾಗಿ ಜಿಲ್ಲಾಧಿಕಾರಿ “ಶಕ್ತಿ” ಗೆ ತಿಳಿಸಿದ್ದಾರೆ.
ಮಲ್ಮ ಬೆಟ್ಟದಲ್ಲಿಯೂ ಅತಿಕ್ರಮಣ
ಕೊಡಗಿನ ಅರಣ್ಯ ಪ್ರದೇಶಗಳಲ್ಲಿ ಇದೀಗ ಅಗ್ನಿ ಅನಾಹುತಗಳಾಗುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಎನ್ಎನ್ ಮೂರ್ತಿ ಅವರು ಮೊಣ್ಣಂಗೇರಿ ಗ್ರಾಮಗಳಲ್ಲಿ ಬೆಂಕಿ ನಂದಿಸಲು ಇಲಾಖೆ ಈಗಾಗಲೇ ೨೫ ಮಂದಿ ಅರಣ್ಯ ಸಿಬ್ಬಂದಿ ತಂಡವನ್ನು ಕಳುಹಿಸಿದ್ದು, ಕೆಲವೇ ಗಂಟೆಗಳಲ್ಲಿ ಈ ಕಾರ್ಯ ನಡೆಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಶುಕ್ರವಾರ ಶ್ರೀ ಪಾಡಿ ಇಗ್ಗುತಪ್ಪ ದೇವಸ್ಥಾನದ ಬಳಿಯಿರುವ ಮಲ್ಮ ಬೆಟ್ಟದಲ್ಲಿ ಕಾಡ್ಗಿಚ್ಚು ಹರಡಿದ್ದು, ೬೦ ಮಂದಿಯ ಅರಣ್ಯ ಇಲಾಖೆ ತಂಡ ಎರಡು ದಿನಗಳ ಕಾಲ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ನಂದಿಸಿದೆ ಎಂದು ಅವರು ಹೇಳಿದರು. “ನಾವು ಕೆಲಸ ಮಾಡುವಲ್ಲಿ ತಾಂತ್ರಿಕ ಮತ್ತು ಕಾನೂನು ಸಮಸ್ಯೆಯನ್ನು ಎದುರಿಸುತ್ತಿದ್ದೇವೆ. ಮಲ್ಮ ಬೆಟ್ಟದ ಪ್ರದೇಶವು ಕಂದಾಯ ಇಲಾಖೆಯ ಅಡಿಯಲ್ಲಿ ಸಿ & ಡಿ ಭೂ ವರ್ಗದ ಅಡಿಯಲ್ಲಿ ಬರುತ್ತದೆ.
ಅನೇಕರು ಆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಕಾಡ್ಗಿಚ್ಚು ತಡೆಯಲು ನಾವು ‘ಫೈರ್ಲೈನ್’ ನಿರ್ಮಿಸಲು ಪ್ರಯತ್ನಿಸಿದಾಗ ಜನರು ವಿರೋಧಿಸುತ್ತಾರೆ ಇಲಾಖೆಯು ಅವರ ಭೂಮಿಯನ್ನು ವಶಪಡಿಸಿಕೊಳ್ಳುತ್ತದೆ ಎನ್ನುವ ಭಯದಿಂದ ಅವರು ಈ ರೀತಿ ಮಾಡುತ್ತಿದ್ದಾರೆ. ಎರಡನೇ ಮೊಣ್ಣಂಗೇರಿಯಲ್ಲಿಯೂ “ಡೀಮ್ಡ್ ಫಾರೆಸ್ಟ್” ಮತ್ತು ಫಸ್ಟ್ ಮೊಣ್ಣಂಗೇರಿಯಲ್ಲಿ ಪೈಸಾರಿ ಭೂಮಿ ಎಂದು ಅರಣ್ಯ ಪ್ರದೇಶಗಳು ದಾಖಲೆಯಲ್ಲಿವೆ. ಇದರಿಂದಾಗಿ ಅರಣ್ಯ ಇಲಾಖೆಯಿಂದ ಸುಸೂತ್ರ ಕಾರ್ಯಾಚರಣೆಗೆ ಧಕ್ಕೆಯುಂಟಾಗುತ್ತಿದೆ. ಕಂದಾಯ ಇಲಾಖೆಯು ಅರಣ್ಯ ಇಲಾಖೆಗೆ ಈ ಎಲ್ಲಾ ಭೂಮಿಗಳನ್ನು ಹಸ್ತಾಂತರಿಸದಿದ್ದರೆ ನಾವು “ಫಯರ್ ಲೈನ್” ಅನ್ನು ನಿರ್ಮಿಸಲು ಸಾಧ್ಯವಿಲ್ಲ ಮತ್ತು ಬೆಂಕಿ ನಂದಿಸುವ ಕೆಲಸಕ್ಕೆ ಖರ್ಚು ಮಾಡಲು ಸಾಧ್ಯವಿಲ್ಲ, ಏಕೆಂದರೆ ಈ ವೆಚ್ಚಗಳಿಗೆ ಅಗತ್ಯವಾದ ಬಜೆಟ್ ಹಣ ಹೊಂದಿಸಲು ನಮಗೆ ಅವಕಾಶವಿರುವುದಿಲ್ಲ.
ಶೀಘ್ರವೇ ಜಿಲ್ಲೆಯ ಹಿರಿಯ ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಗಂಭೀರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ” ಎಂದು ಸಿಸಿಎಫ್ ಬಿಎನ್ಎನ್ ಮೂರ್ತಿ ತಿಳಿಸಿದರು. ಅವರ ಪ್ರಕಾರ, ಕೊಡಗಿನಲ್ಲಿ ಈ ವಿವಿಧ ವರ್ಗದ ೧೮,೦೦೦ ಎಕರೆ ಭೂಮಿಯಲ್ಲಿ ಕಂದಾಯ ಇಲಾಖೆ ೪,೫೦೦ ಎಕರೆಯನ್ನು ಮಾತ್ರ ಇದುವರೆಗೆ ಹಸ್ತಾಂತರಿಸಿದ್ದು, ಹಾರಂಗಿ ಹಿನ್ನೀರು ಜಮೀನು ಪ್ರಕರಣಕ್ಕೆ ಸಂಬAಧಿಸಿದ ತೀರ್ಪಿನಲ್ಲಿ ಇತ್ತೀಚಿನ ಹೈಕೋರ್ಟ್ ಆದೇಶದಂತೆ ಉಳಿದ ಭೂಮಿಯನ್ನು ಕೂಡ ವರ್ಗಾಯಿಸಬೇಕಾಗಿದೆ ಎಂದು ಮಾಹಿತಿಯಿತ್ತರು.
ಈ ಕುರಿತು ಪ್ರತಿಕ್ರಿಯಿಸಿದ ಕೊಡಗು ಜಿಲ್ಲಾಧಿಕಾರಿ ಬಿ.ಸಿ.ಸತೀಶ ಅವರು ಅರಣ್ಯ ಇಲಾಖೆಯೊಂದಿಗೆ ಜಂಟಿಯಾಗಿ ಚರ್ಚಿಸಿ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.