ಸೋಮವಾರಪೇಟೆ, ಮಾ. ೫: ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗ ಕಾರ್ಮಿಕರ ಕ್ರಿಮಿನಲ್ ಚಟುವಟಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕೊಡಗು ಸುರಕ್ಷಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ್ ನರಗುಂದ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕೊಡಗು ಜಿಲ್ಲೆಯ ಕಾಫಿ ತೋಟ ಮತ್ತು ಇತರ ಕಾರ್ಮಿಕ ವಲಯಗಳಲ್ಲಿ ಬಾಂಗ್ಲಾದೇಶಿ ಮೂಲದವರು ಅಕ್ರಮವಾಗಿ ನುಸುಳಿ ಬಂದು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು ನಕಲಿ ದಾಖಲೆ ಸೃಷ್ಟಿಸಿಕೊಂಡು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ. ಇವರುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಾಪೋಕ್ಲು ಠಾಣಾ ವ್ಯಾಪ್ತಿಯ ಕಾರುಗುಂದ ಗ್ರಾಮದ ಕಾಫಿ ತೋಟದಲ್ಲಿ ಗೋಹತ್ಯೆ ನಡೆಸಿರುವುದು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದು. ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು, ದರೋಡೆ, ಕಾಫಿ ಬೆಳೆಗಾರರು, ಮಹಿಳೆಯ ಮೇಲು ಹಲ್ಲೆ ನಡೆಸಿರುವುದು, ಹೀಗೆ ನಿರಂತರವಾಗಿ ಕ್ರಿಮಿನಲ್ ಪ್ರಕರಣಗಳು ನಡೆಯುತ್ತಿವೆ. ಇದು ಮುಂದುವರಿದರೆ ಕೊಡಗಿನ ಹಿತಕ್ಕೆ ಸಮಸ್ಯೆಯಾಗಲಿದೆ. ಕೂಡಲೆ ಪೊಲೀಸ್ ಇಲಾಖೆ, ಕಾರ್ಮಿಕರ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಸುರಕ್ಷಾ ಸಮಿತಿಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಉಮೇಶ್, ಬೋಜೇಗೌಡ, ಮಹೇಶ್ ತಿಮ್ಮಯ್ಯ ಸೇರಿದಂತೆ ಇತರರು ಪ್ರತಿಭಟನೆಯಲ್ಲಿದ್ದರು.