ಪೊನ್ನಂಪೇಟೆ, ಮಾ. ೩: ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಮಾನವ ಪ್ರಾಣಹಾನಿಗೆ ಕಾರಣವಾಗುತ್ತಿರುವ ಅಲ್ಯೂಮಿನಿಯಂ ಏಣಿಗಳ ಬಳಕೆಯನ್ನು ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸುವಂತೆ ನಿಯೋಗವೊಂದು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಕುರಿತು ಕೊಡಗು ಮುಸ್ಲಿಂ ಜಮಾಅತ್ಗಳ ಒಕ್ಕೂಟದ ನಿರ್ದೇಶಕರಾದ, ಕಾಫಿ ಬೆಳೆಗಾರ ಕೆ.ಎಂ. ಅಬ್ದುಲ್ ರಹಮಾನ್ (ಬಾಪು) ನೇತೃತ್ವದ ನಿಯೋಗ ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿಗಳಾದ ಡಾ. ನಂಜುAಡೇಗೌಡ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಅಲ್ಯೂಮಿನಿಯಂ ಏಣಿಗಳ ಬಳಕೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗತೊಡಗಿದೆ. ಕರಿಮೆಣಸು ಮತ್ತು ಅಡಿಕೆ ಕೊಯ್ಲು ಸೇರಿದಂತೆ ತೋಟದ ಮರಗಳ ಕಪಾತು ಕೆಲಸಗಳಿಗೆ ಹೆಚ್ಚಾಗಿ ಬಳಸಲ್ಪಡುತ್ತಿರುವ ಅಲ್ಯೂಮಿನಿಯಂ ಏಣಿಗಳು ವಿದ್ಯುತ್ ತಂತಿಗೆ ಅಕಸ್ಮಿಕವಾಗಿ ತಗುಲಿ ಕಾರ್ಮಿಕರು ಪ್ರತಿ ವರ್ಷ ಜಿಲ್ಲೆಯಲ್ಲಿ ಸಾವಿಗೀಡಾಗುತ್ತಿದ್ದಾರೆ. ಈ ದುರಂತದಲ್ಲಿ ಅಮಾಯಕ ಮತ್ತು ಬಡ ಕಾರ್ಮಿಕರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ಮುಗ್ಧ ಜೀವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಕಳೆದ ೫ ವರ್ಷಗಳಿಂದ ಸುಮಾರು ೪೦ಕ್ಕೂ ಹೆಚ್ಚು ಅಮಾಯಕ ಕಾರ್ಮಿಕರು ಅಲ್ಯೂಮಿನಿಯಂ ಏಣಿಗಳ ದುರಂತದಿAದಾಗಿ ಜೀವ ಕಳೆದುಕೊಂಡಿದ್ದಾರೆ. ಅಲ್ಯೂಮಿನಿಯಂ ಏಣಿಗಳಿಗೆ ಪರ್ಯಾಯವಾಗಿ ಫೈಬರ್ ಏಣಿ, ಒಣಬಿದರಿನ ಏಣಿ ಬಳಕೆಯನ್ನು ಕಡ್ಡಾಯಗೊಳಿಸಲು ಸೂಕ್ತ ಕ್ರಮ ತೆಗೆದುಕೊಂಡು ನಿರಂತರವಾಗಿ ಬಲಿಯಾಗುತ್ತಿರುವ ಮುಗ್ಧ ಕಾರ್ಮಿಕರ ಪ್ರಾಣಹಾನಿಯನ್ನು ತಡೆಗಟ್ಟಲು ತುರ್ತು ಕ್ರಮ ವಹಿಸಬೇಕೆಂದು ಕೆ.ಎಂ. ಅಬ್ದುಲ್ ರಹಮಾನ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಅಲ್ಯೂಮಿನಿಯಂ ಏಣಿಗಳ ಬಳಕೆಯನ್ನು ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಿಷೇಧಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕಾಫಿ ತೋಟದ ಮೇಲ್ಭಾಗದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳನ್ನು ಕನಿಷ್ಟ ೯ ಮೀ. ಎತ್ತರದ ಕಂಬಗಳನ್ನು ಬಳಸಿ ಮೇಲೆತ್ತರಿಸಬೇಕು. ಜೊತೆಗೆ ಕಾಫಿ ತೋಟಗಳಲ್ಲಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳಿಗೆ ಇನ್ಸುಲೇಟೆಡ್ ತಂತಿಗಳನ್ನೇ ಕಡ್ಡಾಯವಾಗಿ ಬಳಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ. ಗ್ರಾ.ಪಂ. ಸದಸ್ಯರ ಒಕ್ಕೂಟದ ಅಧ್ಯಕ್ಷ ಪಿ.ಎ. ಹನೀಫ್, ಸಹ ಕಾರ್ಯದರ್ಶಿ ಕೆ.ಹೆಚ್. ಅಬ್ದುಲ್ ರಹಮಾನ್ ನಿಯೋಗದಲ್ಲಿದ್ದರು.