ಸಿದ್ದಾಪುರ, ಮಾ. ೩: ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಸಿದ್ದಾಪುರದ ಮೈಸೂರು ರಸ್ತೆಯ ಸಂಘದ ಕಚೇರಿಯಲ್ಲಿ ಸಂಘದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ, ಆಟೋ ಚಾಲಕರು ಸ್ನೇಹಜೀವಿಗಳು. ಆಟೋ ಚಾಲಕರು ಬದುಕನ್ನು ರೂಪಿಸಿಕೊಳ್ಳಲು ಸಮಾಜದ ಮುಖ್ಯ ವಾಹಿನಿಗೆ ಬಂದವರು. ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯ ದೊಂದಿಗೆ ವರ್ತನೆ ಮಾಡಬೇಕು. ಆಟೋ ಚಾಲಕರು ಆರ್ಥಿಕವಾಗಿ ಸಫಲತೆ ಹೊಂದಬೇಕು. ಕುಟುಂಬ ನಿರ್ವಹಣೆ ಕಷ್ಟಸಾಧ್ಯ ವಾದರೂ ವೃತ್ತಿಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸ ಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಉಪಾಧ್ಯಕ್ಷ ಶಶಿಧರನ್ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಚಾಲಕರು ಸಂಘಟಿತ ರಾಗಬೇಕು. ಚಾಲನೆಯಲ್ಲಿರುವ ಆಟೋಗಳಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಹೊಂದಿಕೊAಡು ತೆರಳಬೇಕು. ಇಲಾಖೆಯಿಂದ ವಿನಾಕಾರಣ ಸಂಕಷ್ಟಕ್ಕೆ ಒಳಗಾಗದಿರಿ. ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮವಹಿಸಬೇಕು. ಸಂಘದ ಚಾಲಕರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪನೆಗೆ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಪತ್ರಕರ್ತ ವಾಸು ಆಚಾರ್ಯ ಮತ್ತು ಸಿದ್ದಾಪುರ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಮೋಹನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎಂ.ಅರ್. ಸಲೀಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯರಾಗಿದ್ದು ಅಕಾಲಿಕ ಮರಣಕ್ಕೆ ತುತ್ತಾದ ಮಂಜು ಮತ್ತು ಸಿದ್ದಿಕ್ ಅವರಿಗೆ ಒಂದು ನಿಮಿಷಗಳ ಕಾಲ ಸಂತಾಪ ಸೂಚಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ಪವಿತ್ರನ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ್ ಸ್ವಾಗತಿಸಿ, ವಂದಿಸಿದರು.

ಶಶಿಧರನ್ ನಿರೂಪಣೆ ಮಾಡಿದರು. ಸಿದ್ದಾಪುರ ಮತ್ತು ನೆಲ್ಲಿಹುದಿಕೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ಚಾಲಕ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.