ಮಡಿಕೇರಿ, ಮಾ. ೨: ಕೊಡಗು ಜಿಲ್ಲೆಯ ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ಔಷಧಿಯ ಸಸ್ಯಗಳ ಉದ್ಯಾನ ನಿರ್ಮಾಣಕ್ಕೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅಧ್ಯಕ್ಷನಾದ ಬಳಿಕ ತಾನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಂಚರಿಸಿ ಅಲ್ಲಿನ ಜೀವ ವೈವಿಧ್ಯದ ಸ್ಥಿತಿಗತಿಗಳ ಬಗ್ಗೆ ಅವಲೋಕನ ಮಾಡಿದ್ದೇನೆ. ಈ ವೇಳೆ ಕೊಡಗು ಜಿಲ್ಲೆಯ ಪರಿಸರದಲ್ಲಿ ಹಲವು ಔಷಧೀಯ ಸಸ್ಯಗಳು ಇರುವುದನ್ನು ಅನೇಕ ತಜ್ಞರು ನನ್ನ ಗಮನಕ್ಕೆ ತಂದಿದ್ದಾರೆ. ಜತೆಗೆ ಕೆಲವು ಅಪರೂಪದ ಔಷಧೀಯ ಗುಣವಿರುವ ಗಿಡಗಳು ಅಳವಿನಂಚಿ ನಲ್ಲಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿ, ಅವುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮನವಿ ಮಾಡಿದರು.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ಲ್ಲೊಂದು ಔಷಧೀಯ ಸಸ್ಯಗಳ ಉದ್ಯಾನ ಮಾಡಬೇಕೆಂಬ ಇರಾದೆ ಇತ್ತು. ಕಳೆದ ನವೆಂಬರ್‌ನಲ್ಲಿ ಮಡಿಕೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ ಆದಷ್ಟು ಬೇಗ ಇದನ್ನು ಕಾರ್ಯರೂಪಕ್ಕೆ ತರುವಂತೆ ಸಲಹೆ ನೀಡಿದ್ದರು.

(ಮೊದಲ ಪುಟದಿಂದ) ಈ ವಿಚಾರವನ್ನು ಮಂಡಳಿಯ ಸಭೆಯಲ್ಲಿ ಮಂಡಿಸಲಾಗಿ, ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿ ಯೋಜನೆಗೆ ಅನುಮೋದನೆಯೂ ಸಿಕ್ಕಿದೆ. ನಂತರದಲ್ಲಿ ಕೊಡಗು ಜಿಲ್ಲಾಡಳಿತದ ಸಹಕಾರದೊಂದಿಗೆ ಜಾಗ ಗುರುತು ಪ್ರಕ್ರಿಯೆಯೂ ಆಗಿದ್ದು, ಕೊಡಗು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನ ಗೊಳಿಸಲು ತಯಾರಿ ನಡೆದಿದೆ. ಅಗತ್ಯ ಜಾಗವನ್ನು ಅರಣ್ಯ ಇಲಾಖೆ ಒದಗಿಸಿದೆ. ಜತೆಗೆ ಯೋಜನೆ ಅನುಷ್ಠಾನ ಸಂಬAಧ ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ವಿವಿಧ ಹಂತದ ಸಭೆ ನಡೆಸಿ, ರೂಪರೇಷೆ ತಯಾರಿ ಬಗ್ಗೆ ಚರ್ಚಿಸಲಾಗಿದೆ.

ಕುಶಾಲನಗರದ ಹಾರಂಗಿ ಜಲಾಶಯದ ಬಳಿ ಮತ್ತು ಮಡಿಕೇರಿಯ ಅರಣ್ಯ ಭವನ ಬಳಿ ಉದ್ಯಾನ ನಿರ್ಮಾಣವಾಗಲಿದೆ. ಉದ್ದೇಶಿತ ಯೋಜನೆಗೆ ಭೂಮಿ ಪೂಜೆ ಕಾರ್ಯಕ್ರಮ ಸದ್ಯದಲ್ಲಿಯೇ ನಡೆಯಲಿದೆ. ಇಲ್ಲಿ ಕೊಡಗಿನಲ್ಲಿರುವ ಅಪರೂಪದ ಔಷಧೀಯ ಸಸ್ಯಗಳನ್ನು ನೆಟ್ಟು, ಅವುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ರಾಜ್ಯದ ವಿವಿಧೆಡೆಗಳಿಂದ ಔಷಧೀಯ ಗುಣವುಳ್ಳ ಸಸ್ಯಗಳನ್ನು ತಂದು ನೆಟ್ಟು ಅವುಗಳ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಂಡಳಿಯಿAದ ನಡೆಯಲಿದೆ.

ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪ್ರವಾಸಿ ತಾಣಗಳ ವೀಕ್ಷಣೆ ಜತೆಗೆ ಈ ಉದ್ಯಾನಕ್ಕೂ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ವಾಪಸ್ಸಾಗುವ ನಿಟ್ಟಿನಲ್ಲಿ ಬೇಕಾದ ಯೋಜನೆಯನ್ನು ಹಾಕಿಕೊಳ್ಳಲಾಗಿದ್ದು, ಈ ವಿಚಾರದಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಹೇಳಿದರು. ಕೊಡಗಿನಲ್ಲಿ ದಶಕದ ಹಿಂದೆ ಹೇರಳವಾಗಿ ಬೆಳೆಯಲಾಗುತ್ತಿದ್ದ ಕಿತ್ತಳೆ ದೇಶ ವಿದೇಶದಲ್ಲಿ ಪ್ರಸಿದ್ಧಿ ಪಡೆದಿತ್ತು. ಇಂದಿಗೂ ಅದರ ಮಹತ್ವ, ಬೇಡಿಕೆ ಹೆಚ್ಚಿನ ಪ್ರಮಾಣದಲ್ಲೇ ಇದೆ. ಆದರೆ ಕೊಡಗಿನಲ್ಲಿ ಮೂಲ ಕಿತ್ತಳೆ ಬೆಳೆಯುವವರ ಸಂಖ್ಯೆ ಗಣನೀಯ ವಾಗಿ ಕ್ಷೀಣಿಸಿದೆ. ತನ್ನದೇ ಆದ ವಿಶೇಷ ರುಚಿ, ಬಣ್ಣ, ಗಾತ್ರ, ಸುವಾಸನೆಯನ್ನು ಹೊಂದಿರುವ ಕೊಡಗಿನ ಕಿತ್ತಳೆ ಅಳಿವಿನಂಚಿಗೆ ಸಾಗುತ್ತಿರುವುದು ನಿಜಕ್ಕೂ ಆತಂಕದ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ಕೊಡಗಿನ ಕಿತ್ತಳೆ ತಳಿಯ ವೃದ್ಧಿಗಾಗಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಮೂಲ ತಳಿಯ ಕಿತ್ತಳೆ ಬೆಳೆಯುತ್ತಿರುವವರನ್ನು ಗುರುತಿಸಿ, ಅವರಿಂದ ಕಿತ್ತಳೆ ಹಣ್ಣುಗಳನ್ನು ಸಂಗ್ರಹಿಸಿ, ಆದರಿಂದ ಬೀಜ ತೆಗೆದು, ಸಸಿ ಉತ್ಪಾದನೆ ಮಾಡಿ ರೈತರಿಗೆ ವಿತರಿಸುವ ಯೋಜನೆ ಇದೆ. ಜತೆಗೆ ಕಿತ್ತಳೆಗೆ ಬಾಧಿಸುವ ರೋಗ ನಿಯಂತ್ರಣಕ್ಕೆ ಕ್ರಮ, ಕೊಡಗಿನ ಕಿತ್ತಳೆಗೆ ಉತ್ತಮ ಮಾರುಕಟ್ಟೆ ಒದಗಿಸುವ ಬಗ್ಗೆಯೂ ಯೋಜನೆ ಇದೆ. ಚೆಟ್ಟಳ್ಳಿ ತೋಟಗಾರಿಕಾ ಸಂಶೋಧನಾ ಕೇಂದ್ರ, ತೋಟಗಾರಿಕೆ ಇಲಾಖೆ ಕೊಡಗು ಜಿಲ್ಲೆ, ಅರಣ್ಯ ಕಾಲೇಜು ಪೊನ್ನಂಪೇಟೆ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕಾರ್ಯಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ.

ಜಿಲ್ಲೆಯ ಎಲ್ಲಾ ಕಾಫಿ ತೋಟಗಳಲ್ಲಿ ಕೊಡಗಿನ ಕಿತ್ತಳೆಯ ಸ್ವಾದ ಹಬ್ಬಬೇಕು, ಬೆಳೆಯುವವರ ಪ್ರಮಾಣ ಹೆಚ್ಚಾಗಬೇಕು. ಆ ಮೂಲಕ ದಶಕದ ಹಿಂದೆ ಇದ್ದ ಕೊಡಗಿನ ಕಿತ್ತಳೆಯ ಘಮಲನ್ನು ಮತ್ತೆ ಹಬ್ಬುವಂತೆ ಮಾಡಬೇಕೆಂಬ ಮಹದಾಸೆ ಜೀವ ವೈವಿಧ್ಯ ಮಂಡಳಿಯದ್ದು. ಈ ಕುರಿತ ಹೆಚ್ಚಿನ ವಿವರವನ್ನು ಮುಂದಿನ ದಿನದಲ್ಲಿ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಜಿಲ್ಲೆಯ ಬೆಳೆಗಾರರು ಸಹಕಾರ ನೀಡಬೇಕಾಗಿ ರವಿಕಾಳಪ್ಪ ಮನವಿ ಮಾಡಿದರು. ಗೋಷ್ಠಿಯಲ್ಲಿ ಮಂಡಳಿಯ ಸದಸ್ಯ ಡಾ. ಕುಶಾಲಪ್ಪ, ಉಪಸಮಿತಿ ಸದಸ್ಯ ಪ್ರಶಾಂತ್ ಭೀಮಯ್ಯ, ಬಿಜೆಪಿ ವಕ್ತಾರ ಮಹೇಶ್ ಜೈನ್, ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ ಉಪಸ್ಥಿತರಿದ್ದರು.