ಪಶ್ಚಿಮ ಬಂಗಾಳದಲ್ಲಿ ಖಾತೆ ತೆರೆದ ಕಾಂಗ್ರೆಸ್
ಕೋಲ್ಕತಾ, ಮಾ. ೨: ಕೊನೆಗೂ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕಾಂಗ್ರೆಸ್ ಖಾತೆ ತೆರೆದಿದ್ದು, ಸಾಗರ್ದಿಘಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೇರೊನ್ ಬಿಸ್ವಾಸ್ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸಾಗರ್ದಿಘಿ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬೇರೊನ್ ಬಿಸ್ವಾಸ್ ಅವರು ತಮ್ಮ ಪ್ರತಿಸ್ಪರ್ಧಿ ಟಿಎಂಸಿಯ ದೇಬಾಶಿಸ್ ಬ್ಯಾನರ್ಜಿ ಅವರ ವಿರುದ್ಧ ೨೨,೯೮೦ ಮತಗಳ ಅಂತರದಿAದ ಗೆಲುವು ಸಾಧಿಸಿದ್ದಾರೆ. ೧೬ನೇ ಸುತ್ತಿನ ಮತ ಎಣಿಕೆಯ ನಂತರ, ಎಡಪಕ್ಷಗಳ ಬೆಂಬಲ ಹೊಂದಿರುವ ಬಿಸ್ವಾಸ್ ಅವರು ೮೭,೬೬೭ ಮತಗಳನ್ನು ಗಳಿಸಿದ್ದಾರೆ ಎಂದು ಚುನಾವಣಾ ಆಯೋಗದ ವೆಬ್ಸೈಟ್ ತಿಳಿಸಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣ : ಮೂವರ ಖುಲಾಸೆ, ಓರ್ವ ದೋಷಿ
ಲಖನೌ, ಮಾ. ೨: ಮಹತ್ವದ ಬೆಳವಣಿಗೆಯೊಂದರಲ್ಲಿ ನ್ಯಾಯಾಲಯವು ೨೦೨೦ರ ಹಾಥರಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದೆ ಮತ್ತು ಒಬ್ಬ ವ್ಯಕ್ತಿಯನ್ನು ತಪ್ಪಿತಸ್ಥನೆಂದು ಘೋಷಿಸಿದೆ. ಪ್ರಕರಣದ ನಾಲ್ವರು ಆರೋಪಿಗಳಾದ ಸಂದೀಪ್, ರವಿ, ಲವ್ ಕುಶ್ ಮತ್ತು ರಾಮು ಪೈಕಿ ಸಂದೀಪ್ ಮಾತ್ರ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ೨೦೨೦ರ ಸೆಪ್ಟೆಂಬರ್ ೧೪ರಂದು ಹಾಥರಸ್ನಲ್ಲಿ ೧೯ ವರ್ಷದ ದಲಿತ ಯುವತಿ ಮೇಲೆ ನಾಲ್ವರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು . ಚಿಕಿತ್ಸೆಗೆ ಸ್ಪಂದಿಸದೆ ಸಂತ್ರಸ್ತೆ ಸೆಪ್ಟೆಂಬರ್ ೨೯ ರಂದು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆರೋಪಿಗಳ ಖುಲಾಸೆಯಿಂದ ಅಸಮಾಧಾನಗೊಂಡಿದ್ದು, ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಶೀಘ್ರವೇ ಹೈಕೋರ್ಟ್ ಮೆಟ್ಟಿಲೇರುವುದಾಗಿ ಸಂತ್ರಸ್ತೆಯ ಕುಟುಂಬ ತಿಳಿಸಿದೆ.
ಸಿಜೆಐ- ಬಾರ್ ಅಸೋಸಿಯೇಷನ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ!
ನವದೆಹಲಿ, ಮಾ. ೨: ಸಿಜೆಐ ಹಾಗೂ ಸುಪ್ರೀಂ ಕೋರ್ಟ್ನ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರ ನಡುವಿನ ಮಾತಿನ ಚಕಮಕಿಗೆ ಇಂದು ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು. ಲಾಯರ್ಸ್ ಚೇಂಬರ್ಸ್ಗೆ ಭೂಮಿ ಮಂಜೂರು ಮಾಡುವ ಸಂಬAಧ ಈ ಮಾತಿನ ಚಕಮಕಿ ನಡೆದಿದೆ. ಪ್ರಕರಣಗಳ ಉಲ್ಲೇಖದ ಸಂದರ್ಭದಲ್ಲಿ ಎಸ್ಸಿಬಿಎ ಅಧ್ಯಕ್ಷರು ಸಿಜೆಐ ಹಾಗೂ ನ್ಯಾ. ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪರ್ದಿವಾಲ ಅವರಿದ್ದ ಪೀಠದ ಎದುರು ಪ್ರಕರಣವನ್ನು ಉಲ್ಲೇಖಿಸಿದ್ದು, ವಿಚಾರಣೆಯ ಪಟ್ಟಿಯಲ್ಲಿ ಪ್ರಕರಣವನ್ನು ಸೇರಿಸಲು ೬ ತಿಂಗಳಿನಿAದ ಕಷ್ಟಪಡುತ್ತಿದ್ದೇನೆ ಎಂದು ಹೇಳಿದ್ದಾರೆ. ವಿಚಾರಣೆಯ ಪಟ್ಟಿಗೆ ಸೇರಿಸಲು ೬ ತಿಂಗಳಿನಿAದ ಕಷ್ಟಪಡುತ್ತಿದ್ದೇನೆ, ನನ್ನನ್ನು ಸಾಮಾನ್ಯ ಕಕ್ಷಿದಾರನ ರೀತಿಯಲ್ಲೇ ಪರಿಗಣಿಸಿ ಎಂದು ಸಿಂಗ್ ಹೇಳಿದ್ದಾರೆ. ಇದಕ್ಕೆ ಕೆಂಡಾಮAಡಲರಾದ ನ್ಯಾ. ಚಂದ್ರಚೂಡ್, ಮುಖ್ಯ "ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಬೇಡಿ, ಇದು ನಡೆದುಕೊಳ್ಳುತ್ತಿರುವ ರೀತಿಯೆ? ದಯಮಾಡಿ ಕುಳಿತುಕೊಳ್ಳಿ... ಈ ರೀತಿ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ನಿಮ್ಮಿಂದ ನಾನು ದೃತಿಗೆಡುವುದಿಲ್ಲ" ಎಂದು ಹೇಳಿದ್ದಾರೆ.
ಶವದ ಜೊತೆ ಎರಡು ದಿನ ಕಳೆದ ಬಾಲಕ
ಬೆಂಗಳೂರು, ಮಾ. ೨: ೧೪ ವರ್ಷದ ಬಾಲಕ ತನ್ನ ಮೃತ ತಾಯಿಯ ಶವದೊಂದಿಗೆ ಎರಡು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ ಬಾಲಕನಿಗೆ ತನ್ನ ತಾಯಿ ಸತ್ತಿರುವುದು ಗೊತ್ತಿರಲಿಲ್ಲ, ಆಕೆ ಕೋಪಗೊಂಡಿದ್ದರಿAದ ಮಲಗಿದ್ದಾಳೆ ಹೀಗಾಗಿ ತನ್ನ ಜೊತೆ ಮಾತನಾಡುವುದಿಲ್ಲ ಎಂದು ಅ ಬಾಲಕ ಭಾವಿಸಿದ್ದ. ಆರ್.ಟಿ. ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಇರುವ ಮನೆಯಲ್ಲಿ ಫೆಬ್ರವರಿ ೨೬ ರಂದು ಲೋ ಬಿಪಿ ಮತ್ತು ಶುಗರ್ನಿಂದಾಗಿ ೪೪ ವರ್ಷದ ಅಣ್ಣಮ್ಮ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಫೆಬ್ರವರಿ ೨೮ರ ವರೆಗೂ ಬಾಲಕ ತನ್ನ ತಾಯಿಯ ಶವದ ಜೊತೆಗೆ ಕಾಲ ಕಳೆದಿದ್ದಾನೆ. ಹೊರಗೆ ಬಂದು ಊಟ, ತಿಂಡಿ ತೆಗೆದುಕೊಂಡು ಮತ್ತೆ ಮನೆ ಸೇರಿಕೊಳ್ಳುತ್ತಿದ್ದನಂತೆ. ರಾತ್ರಿ ಪೂರ್ತಿ ತಾಯಿಯ ಜೊತೆಯಲ್ಲೇ ಮಲಗಿ ಕಾಲ ಕಳೆಯುತ್ತಿದ್ದನಂತೆ. ಆದರೆ ಏರಿಯಾದ ಜನರಿಗೆ ತಾಯಿ ಸಾವಿನ ಬಗ್ಗೆ ಕೊಂಚವೂ ಮಾಹಿತಿ ನೀಡಿಲ್ಲ. ನಂತರ ತಂದೆ ಸ್ನೇಹಿತರಿಗೆ ತನ್ನ ತಾಯಿ ಮಾತನಾಡುತ್ತಿಲ್ಲ ಎಂದು ಹೇಳಿದ್ದನಂತೆ. ಆಗ ಸ್ನೇಹಿತರು ಮನೆಗೆ ಬಂದು ನೋಡಿದಾಗ ಅಣ್ಣಮ್ಮ ಮೃತಪಟ್ಟಿರುವುದು ಗೊತ್ತಾಗಿದೆ. ಒಂದು ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಸಾವನ್ನಪ್ಪಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು.
ಮಾತುಕತೆ ಮತ್ತು ರಾಜತಾಂತ್ರಿಕತೆಯಿAದ ಬಿಕ್ಕಟ್ಟು ಪರಿಹಾರ
ನವದೆಹಲಿ, ಮಾ. ೨: ಉಕ್ರೇನ್ ಬಿಕ್ಕಟ್ಟನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಹೇಳಿಕೆಯಲ್ಲಿ ಮೋದಿ, ಉಕ್ರೇನ್ ವಿವಾದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಪರಿಹರಿಸಬಹುದು ಎಂದು ಭಾರತವು ಮೊದಲಿನಿಂದಲೂ ಸ್ಪಷ್ಟಪಡಿಸಿದೆ ಎಂದು ಹೇಳಿದರು. ಭಾರತಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಮೆಲೋನಿ, ಜಿ-೨೦ ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಕಾರಣ ಉಕ್ರೇನ್ನಲ್ಲಿನ ಯುದ್ಧವನ್ನು ನಿಲ್ಲಿಸಲು ಸಮಾಲೋಚನಾ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಹುಪಕ್ಷೀಯ ಸಮುದಾಯವನ್ನು ಒಟ್ಟಿಗೆ ಇಟ್ಟುಕೊಳ್ಳುವುದು ಮುಖ್ಯವಾಗಿದೆ ಮತ್ತು ಭಾರತದ ಅಧ್ಯಕ್ಷ ಸ್ಥಾನವು ಇನ್ನೂ ಹೆಚ್ಚಿನದನ್ನು ಮಾಡಬಹುದೆಂದು ನಾವು ಭಾವಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
‘ರಾಮ್ ರಹೀಮ್ ಸರಣಿ ಹಂತಕ ಅಲ್ಲ’
ಚಂಡೀಗಢ, ಮಾ. ೨: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರಿಗೆ ನೀಡಿರುವ ಪೆರೋಲ್ ಅನ್ನು ಹರಿಯಾಣ ಸರ್ಕಾರ ಸಮರ್ಥಿಸಿಕೊಂಡಿದ್ದು, ಅವರು 'ಕಠಿಣ ಕೈದಿ' ವರ್ಗದ ಅಡಿಯಲ್ಲಿ ಬರುವುದಿಲ್ಲ ಮತ್ತು ಅವರು ಸರಣಿ ಹಂತಕ ಅಲ್ಲ ಎಂದು ಹೇಳಿದೆ. ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ೨೦ ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಮುಖ್ಯಸ್ಥನಿಗೆ ಜನವರಿ ೨೦ ರಂದು ೪೦ ದಿನಗಳ ಪೆರೋಲ್ ನೀಡಲಾಗಿದೆ. ಎರಡು ಕೊಲೆ ಪ್ರಕರಣಗಳಲ್ಲೂ ರಾಮ್ ರಹೀಮ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ. ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿ(ಎಸ್ಜಿಪಿಸಿ) ಇತ್ತೀಚೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಪೆರೋಲ್ ಆದೇಶವನ್ನು ಪ್ರಶ್ನಿಸಿದೆ. ಅಲ್ಲದೆ ಎರಡು ಕೊಲೆ ಪ್ರಕರಣಗಳಲ್ಲಿ ರಾಮ್ ರಹೀಮ್ ಸಿಂಗ್ಗೆ ಶಿಕ್ಷೆ ಆಗಿರುವುದರಿಂದ ಅವರು "ಸರಣಿ ಹಂತಕ" ಎಂದು ವಾದಿಸಿದೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಬಂಧನ
ಬೆAಗಳೂರು, ಮಾ. ೨: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ(ಕೆಎಸ್ ಡಿಎಲ್) ರಾಸಾಯನಿಕ ಪೂರೈಸುವ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ೪೦ ಲಕ್ಷ ಲಂಚ ಪಡೆದ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ. ಪ್ರಶಾಂತ್ ಮಾಡಾಳ್ ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿ. ತಂದೆಯ ಪರವಾಗಿ ಲಂಚದ ಹಣ ಪಡೆಯುತ್ತಿದ್ದಾಗ ದಾಳಿ ಮಾಡಿದ ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಪೊಲೀಸರು ಬಂಧಿಸಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯಾಗಿರುವ ಪ್ರಶಾಂತ್, ನಿಯೋಜನೆ ಮೇಲೆ ಬೆಂಗಳೂರು ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿ ಹುದ್ದೆಯಲ್ಲಿದ್ದಾರೆ. ಅವರು ಹೊಂದಿರುವ ಖಾಸಗಿ ಕಚೇರಿಯೊಂದರಲ್ಲಿ ಸಂಜೆ ೬.೪೫ಕ್ಕೆ ಲಂಚದ ಹಣ ಪಡೆಯುವಾಗ ಬಂಧಿಸಲಾಗಿದೆ. ರಾಸಾಯನಿಕ ಪೂರೈಕೆಗೆ ಆಯ್ಕೆಯಾಗಿರುವ ಗುತ್ತಿಗೆದಾರರಿಂದ ಮಾಡಾಳ್ ವಿರೂಪಾಕ್ಷಪ್ಪ ೮೧ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹಣವನ್ನು ಮಗನಿಗೆ ತಲುಪಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.