ಕರಿಕೆ, ಮಾ. ೧: ಕೊಡಗು ಅರಣ್ಯ ವೃತ್ತದ ಮಡಿಕೇರಿ ವನ್ಯಜೀವಿ ಉಪವಿಭಾಗದ ಬ್ರಹ್ಮಗಿರಿ ಅಭಯಾರಣ್ಯದಂಚಿನ ಮಾಕುಟ್ಟ ವಲಯ ವ್ಯಾಪ್ತಿಯಲ್ಲಿ ಗಜಗಳ ಕಾಳಗದಲ್ಲಿ ಗಾಯಗೊಂಡಿರುವ ಕಾಡಾನೆಗೆ ಚಿಕಿತ್ಸೆ ನೀಡುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಬ್ರಹ್ಮಗಿರಿ ಅಭಯಾರಣ್ಯದ ಮಾಕುಟ್ಟ ಅರಣ್ಯದಲ್ಲಿ ಗಾಯಗೊಂಡಿರುವ ಕಾಡಾನೆಯನ್ನು ಪತ್ತೆಹಚ್ಚಿದ ಅರಣ್ಯ ಸಿಬ್ಬಂದಿಗಳು ತಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ಇದಕ್ಕೆ ಸೂಕ್ತವಾದ ರೀತಿಯಲ್ಲಿ ಚಿಕಿತ್ಸೆ ನೀಡಲು ಯೋಚಿಸಿದ ಇಲಾಖೆ ಮಡಿಕೇರಿ ವನ್ಯಜೀವಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಶಿವರಾಮ ಬಾಬು ಅವರ ನೇತೃತ್ವದಲ್ಲಿ ಮತ್ತಿಗೋಡು ಸಾಕಾನೆ ಶಿಬಿರದ ಕುಮ್ಕಿ ಆನೆಗಳ ಸಹಕಾರದಿಂದ ಪಶುವೈದ್ಯ ಅಧಿಕಾರಿಗಳಾದ ಡಾ. ಚಿಟ್ಟಿಯಪ್ಪ ಹಾಗೂ ಮೈಸೂರು ಮೃಗಾಲಯದ ವೈದ್ಯಾಧಿಕಾರಿ ಡಾ. ಪ್ರಶಾಂತ್, ಇಲಾಖೆಯ ಶಾರ್ಪ್ಶೂಟರ್ ಉಪ ವಲಯ ಅರಣ್ಯಾಧಿಕಾರಿ ರಂಜನ್ ಹಾಗೂ ಮಾಕುಟ್ಟ ವಲಯದ ಅರಣ್ಯ ಸಿಬ್ಬಂದಿ, ಆನೆ ಕ್ಷಿಪ್ರ ಕಾರ್ಯಪಡೆಗಳ ತಂಡದವರು ಕಾರ್ಯಾಚರಣೆ ನಡೆಸಿ ಗಂಭೀರವಾಗಿ ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಿ ಉಪಚರಿಸುತ್ತಿದ್ದಾರೆ. ಇಲಾಖೆಯ ಈ ಕಾರ್ಯಕ್ಕೆ ಪರಿಸರ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

-ಸುಧೀರ್ ಹೊದ್ದೆಟ್ಟಿ